Index   ವಚನ - 66    Search  
 
ಜನನಿಜಠರದಿಂದುಯವಾದಾಕ್ಷಣವೆ, ಗುರುಕರುಣದಿಂದ ಲಿಂಗವೆಂಬ ಪುರುಷಂಗೆ ಶರೀರವೆಂಬ ಸತಿಯಳಿಗೆ ರತಿಕ್ರೀಡೆವಿಲಾಸದೋರಿದವೇಳೆಯೊಳು ತಮ್ಮಾಚಾರನಿಮಿತ್ತವಾಗಿ ಲಿಂಗಮಂ ಧರಿಸಿ, ಗುರುಪಾದತೀರ್ಥದ ಬಿಂದುವಂ ಜಿಹ್ವಾಗ್ರಕ್ಕೆರೆದು, ಲಿಂಗಾಂಗವಾಯಿತ್ತೆಂಬ ಜನಸನ್ಮತವಾಗಿರ್ಪ ತದನಂತರದೊಳು ಮರ್ತ್ಯದೊಳಿರ್ಪ ಶಿವಲಿಂಗಧಾರಕಮತದವರು ಒಬ್ಬರಿಗೊಬ್ಬರು ನಂಟರಾಗಿ, ಗಂಡುಹೆಣ್ಣು ಒಂದಾಸನದ ಮೇಲೆ ತಂಡುಲಮಂ ತಳೆದು, ಗುರು-ಹಿರಿಯರು ಬಂಧು-ಬಳಗ ಕಳಸ-ಕನ್ನಡಿ ಮುತ್ತೈದೆರೆಂದು ನೆರೆದು ಬಾಸಣಿಗೆಯ ಹಾಕಿ, ಸಲೆ ಪುರುಷರೆಂದು ಕೂಡಿದವರೆಲ್ಲ ಕರೆದು, ಗಣಸಮುದಾಯಕ್ಕೆ ಶರಣುಮಾಡಿಸಿ, ಮಧ್ಯಕಲ್ಪನೆಯಿಂದ ಹೆಣ್ಣು ಗಂಡಿನವರಿಗೆ ಯಾವುದಾದರೂ ಒಂದು ಕುಂದುಕೊರತೆ ಬಂದು ಸಂಕಲ್ಪವಾದರೂ ಸರಿಯೇ, ಗಂಡಿಗೆ ಆದಿವ್ಯಾಧಿಗಳಿಂದ ಆಯುಷ್ಯ ತೀರಲರಿಯವಾದರೂ ಸರಿಯೇ, ಆ ಗಂಡಿನಾಭರಣವ ಅವರ ತಂದೆತಾಯಿಗೊಪ್ಪಿಸಿ, ಆ ಶಕ್ತಿಯೆಂಬ ನಾರಿಯ ಮತ್ತೊಬ್ಬ ಪುರುಷಗೆ ಸಲ್ಲಿಸಿ, ಹಿಂದಣಂತೆ ಗೊತ್ತುಮಾಡಿದ ತದನಂತರದಲ್ಲಿ, ಮಾತು ಎಷ್ಟು ವೇಳೆಯಾದರೂ ಮಿತಿದಪ್ಪಿ, ಹಿಂದಣಂತೆ ವರ್ತಿಸಿದೊಡೆ ಮುಂದೆ ಅನಾಚಾರಿಯು, ಕಂಕಣವ ಕಟ್ಟಿ, ಲಗ್ನವ ಮಾಡುವುದಕ್ಕೆ ಯೋಗ್ಯಳೆ ಸಲ್ಲ, ಸಂದೇಹವಿಲ್ಲ. ಬಾಸಣಿಕೆಯಾದ ತದನಂತರದಲ್ಲಿ ಗುರು-ಹಿರಿಯರು, ಬಂಧು-ಬಳಗ, ಪುರುಷನುಳ್ಳ ಮುತ್ತೈದೆರೆಲ್ಲ ನೆರೆದು, ಹಸೆ ಹಂದರ ದಂಡೆ ಬಾಸಿಂಗ ಕಂಭಕುಂಭ ಸಾಕ್ಷಿಯಾಗಿ ಸೆರಗ ಗಂಟಿಕ್ಕಿ, ಕಂಕಣವ ಕಟ್ಟಿ, ಸುಮುಹೂರ್ತೇ ಸಾವಧಾನವೆಂದು ಸೇಸೆಯನೆರೆದು, ಮೇಲೆ ಪುರುಷವಿಯೋಗವಾದ ಮೇಲೆ, ಆ ಸತಿ ಕಳಸಕನ್ನಡಿ ಸೇವೆಗೆ ಬಾಗಿನ ಮುತ್ತೈದೆಗೆ ಸಲ್ಲುವಳೆ ಸರಿ. ಅದುಯೇನು ಕಾರಣವೆಂದಡೆ: ಆ ಸತಿಗೆ ಕ್ರಿಯಾಪುರುಷನ ಕಂಕಣ ಒಂದು, ಜ್ಞಾನಪುರುಷನ ಕಂಕಣ ಒಂದು, ಈ ತೆರದಿಂದುಭಯಸಂಗವಾದುರರೊಳು ಒಬ್ಬ ಕ್ರಿಯಾರಮಣ ಶೂನ್ಯವಾದಲ್ಲಿ ಜ್ಞಾನರಮಣನ ಕೂಡಿ, ಮುತ್ತೈದೆಯೆನಿಸಿ, ತ್ರಿವಿಧೋಪದೇಶದಿಂದ, ಅಷ್ಟಾವರಣದಿಂದಲ್ಲಿ ಸಮರಸಭಕ್ತಿ ಸರ್ವೇಂದ್ರಿಗಳಲ್ಲಿ ವಿರಕ್ತಿವಿಡಿದು, ಅಂತರ್ಜ್ಞಾನ ಬಹಿರ್ಕ್ರಿಯಾಚಾರದಿಂದ ನಡೆನುಡಿ ದೃಢಚಿತ್ತಳಾಗಿ, ಸರ್ವಾಚಾರಸಂಪದಮನ್ನನುಭವಿಸಿ, ಲೀಲೆ ಸಮಾಪ್ತವಾಗಿ, ಶೂನ್ಯವ ಹೊಂದುವುದೆ ನಿರೂಪಾಧಿಕ ಷಟ್ ಸ್ಥಲ. ಸದ್ಧರ್ಮನಾಯಕರಾದ ಭಕ್ತಮಹೇಶ್ವರ ಪ್ರಸಾದಸೇವಿತರ ಯೋಗ್ಯವುಳ್ಳ ಮಾರ್ಗವಿದೀಗ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜನಲಿಂಗೇಶ್ವರ.