Index   ವಚನ - 74    Search  
 
ಹರಗುರುಮಾರ್ಗಾಚಾರಸಂಪದ ನಾಯಕ ಗುರುಪುತ್ರರು, ಹರಿಯಜಸುರಮನುಮುನೀಂದ್ರಾದಿ ನರಗುರಿಗಳ ಅಂಗಭೋಗದನಾರ್ಪಿತ ಅನಾಚಾರ ಅಕ್ರಿಯೆ ಅಜ್ಞಾನ ಅಸತ್ಯಕಾಯಕ ಅಯೋಗ್ಯ ಪಾತಕ ಸೂತಕ ಫಲಪದದ ನಡೆನುಡಿ ಕೊಡುಕೊಳುವದೇನೂ ಬೆರಸಲಾಗದು. ಅವಾವೆಂದಡೆ: ಶ್ರುತಿ ಗುರುವಚನಾನುಭಾವಗಳೊಳು ಅಲ್ಲವೆಂದುದ ಖಂಡ್ರಿಸಿ ಬಿಟ್ಟು, ನಿರಶನವ ಮಾಡಿದುದ ಮುಟ್ಟಲಾಗದು, ಕಾಯಭ್ರಾಂತು ಮನಭ್ರಾಂತುವಿಡಿದು ತನ್ನ ನಿಜ ತಾ ಕಾಣದೆ ಕರದಲ್ಲೊಂದು ಪಿಡಿದು, ನುಡಿಯಲ್ಲೊಂದು ಸ್ತುತಿಸಿ, ಮನದಲ್ಲೊಂದು ನಂಬಿ ನಚ್ಚಿ ಮಚ್ಚಿ ಪರಾತ್ಪರವಿದೆಂದು, ಪುರಾಣ ಶ್ಮಶಾನ ಪ್ರಸೂತಿ ವೈರಾಗ್ಯದಿಂದ, ನಿಜಭಕ್ತಜ್ಞಾನ ವೈರಾಗ್ಯದ ಕುರುಹ ತಿಳಿಯದೆ, ಅಂದಿನ ಗಣವೆಂದು ನುಡಿದಲ್ಲಿ ಅಂದಿನ ನಡೆನುಡಿ ದೃಢಚಿತ್ತವ ಹೋಗಲಾಡಿಸಿದವರಯೋಗ್ಯ ಅನಾಚಾರಿ ಅಸತ್ಯರೆಂದುದು ನೋಡಾ ಗುರುವಚನ. ನೀತಿಯ ಕೈಯಲ್ಲಿ ಪಿಡಿದು, ಅನೀತಿಯ ಪಾದದಲ್ಲಿ ಮೆಟ್ಟಿ ನೀತಿಯಾದ ಪಾದೋದಕ ಪ್ರಸಾದವನಿತರಲ್ಲಿ ಕೊಟ್ಟುಕೊಂಡು ಬಳಸಿ ಅನೀತಿಯಾದನ್ನುದಕಾದಿಗಳ ಅನೀತರಲ್ಲಿ ಸುರುಚಿಗಳಿಂದ ಕೊಟ್ಟುಕೊಂಡು ಬಳಸಿ, ಲೌಕಿಕ ಅಲೌಕಿಕ ಸಹಜಲೌಕಿಕ ಅರ್ಥಪದಾರ್ಥ ಪರಮಾರ್ಥದ ವಿವರ ಭೇದಿಸಿ, ಗುರುವಚನಪ್ರಮಾಣ ಕ್ರಿಯಾಚಾರ ನಡೆನುಡಿ ದೃಢನಿಷ್ಠೆಯನರಿದು, ತನು ಮನ ಧನ ಪುತ್ರ ಮಿತ್ರ ಕಳತ್ರ ಅರ್ಥ ಪ್ರಾಣ ಅಭಿಮಾನ ಮನ್ನಣೆಯೆಂಬ ಮಲತ್ರಯಪಾಶವ ಮರೆದು, ಪಿಪೀಲಿಕನಂತೆ ಬೇರಿನಲ್ಲಿರಿದು, ಆ ವೃಕ್ಷವನೇರಿ ಆ ಕೊನೆಯಲ್ಲಿರುವ ಫಲದ ಅಮೃತರಸವ ಸವಿದಂತೆ ಮಹದರುವೆಂಬ ಗುರುಚರಣಕಮಲದಿರವ ಘನಮನದೃಷ್ಟಿಯಿಂ ನೋಡಿ, ವಾಸನಂಗೈದು, ಜ್ಞಾನಾನಂದವೆಂಬ ಪರಿಮಳ ವೇಧಿಸಿ, ಹರುಷಾನಂದವೇರಿ, ನಿರಾವರಣ ಘನಲಿಂಗಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿಯೆಂಬ ಸರ್ವಾಚಾರವೃಕ್ಷವನೇರಿ, ಕ್ರಿಯಾಜಪ ಜ್ಞಾನಜಪ ಮಹಾಜ್ಞಾನಜಪಮಂ ಚಿನ್ನಾದ ಪರನಾದ ಮಹಾನಂದವನೊಳಕೊಂಡು, ಶೋಭಿಸುವ ಹರೆಹರೆಗಳ ಹಬ್ಬಿ, ಘಟಶಕ್ತಿಯೆಂಬ ಸೆರೆಯಿಂ ಬಿಗಿದಪ್ಪಿ ಪರಿಪೂರ್ಣ ಹಸ್ತವ ನಿಗುಚಿ, ತ್ವಾಟಿಯಲ್ಲಿ ಬೀಜವಿಲ್ಲ. ರೋಗವಿಲ್ಲದಂಥ ತಾನಂಜೂರ ಜ್ಯೋತಿರ್ಮಯವೆಂಬ ಹಣ್ಣುಕಡಿದು, ತಾನೇ ತಾನಾಗಿ, ಪರಮಾನಂದರಸವ ಸವಿದುಂಡುಪವಾಸಿ ಬಳಸಿಬ್ರಹ್ಮಚಾರಿಯಾಗಿ ಇಹಲೋಕದ ಭೋಗ, ಪರಲೋಕದ ಮೋಕ್ಷಕ್ಕೆ ಹೊರಗಾಗಿ ನಿರಂಜನಪದ ನಿರ್ವಾಣಫಲದಾಯಕರೆ ನಿಮ್ಮ ಸುಸಂಗಿಗಳು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.