Index   ವಚನ - 73    Search  
 
ಆಚಾರದರುವಿನ ಕುರುಹನರಿಯದೆ, ಅಂಗಭೋಗವಿರಹಿತನಾದ ಮಲತ್ರಯದೂರ ಭಕ್ತಿತ್ರಯವನರಿದ ಭಕ್ತಸ್ಥಲ, ಗುಣತ್ರಯವಳಿದುಳಿದು ದೀಕ್ಷತ್ರಯವನರಿದ ಗುರುಸ್ಥಲ, ಜೀವತ್ರಯವಳಿದುಳಿದು ಅರ್ಚನತ್ರಯವನರಿದ ಲಿಂಗಸ್ಥಲ, ಅಜ್ಞಾನತ್ರಯವಳಿದ ಸುಜ್ಞಾನತ್ರಯವನರಿದ ಜಂಗಮಸ್ಥಲ, ಮನತ್ರಯವನಳಿದುಳಿದು ಪರಮಾನುಭಾವತ್ರಯವರಿದ ಪಾದೋದಕಸ್ಥಲ, ಭಾವತ್ರಯವಳಿದುಳಿದು ಪರಿಪೂರ್ಣಾರ್ಪಣತ್ರಯವರಿದ ಪ್ರಸಾದಸ್ಥಲ, ಅವಸ್ಥಾತ್ರಯವಳಿದುಳಿದು ಚಿತ್ಕಳಾತ್ರಯವರಿದ ವಿಭೂತಿಸ್ಥಲ, ತನುತ್ರಯವಳಿದುಳಿದು ಚಿದ್ಬಿಂದುತ್ರಯವರಿದ ರುದ್ರಾಕ್ಷಿಸ್ಥಲ, ಪ್ರಾಣತ್ರಯವಳಿದುಳಿದು ಚಿನ್ನಾದತ್ರಯವರಿದ ಮಂತ್ರಸ್ಥಲವೆಂಬ ಇಪ್ಪತ್ತೇಳುಸ್ಥಲವೆ ಆಚರಣೆಯಾಗಿ, ಉಳಿದ ಇಪ್ಪತ್ತನಾಲ್ಕುಸ್ಥಲವೆ ಸಂಬಂಧವಾಗಿ, ತನ್ನಾದಿಮಧ್ಯವಸಾನವರಿದು ಮರೆದು ನಿಜದಲ್ಲಿ ನಿಂದು, ನಿರ್ವಯಲಾದ ನಿಃಕಳಂಕರೆ ಗುರುಸಾಂಪ್ರದಾಯಕರೆಂಬೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.