Index   ವಚನ - 78    Search  
 
ಅನಾದಿಪ್ರಮಥಗಣ ಸನ್ಮಾನಿಗಳಾದವರು ಹೊಂದಿ ಹೊರೆದ ಪಿತ-ಮಾತೆ, ಸತಿ-ಸುತ, ಸಹೋದರ-ನಂಟರು ಮೊದಲಾದವರಿಗೆ ಸಲುವಂಥ ಪಂಚಾಚಾರದಿರವಿನ ಸೂತ್ರ. ಹರನಿರೂಪಣ ಸಾಕ್ಷಿ: ``ಗುರುಲಿಂಗಜಂಗಮಶ್ಚೈವ ಪ್ರಸಾದಂ ಪಾದವಾರಿ ಚ | ಲಿಂಗಬಾಹ್ಯಾನ್ನಜಾನಾತಿ ಅಣುಮಾತ್ರಂ ಚ ಕಾರಯೇತ್ || ಲಿಂಗಾಚಾರಸ್ಸದಾಚಾರಃ ಶಿವಾಚಾರಸ್ತಥೈವ ಚ | ಗಣಾಚಾರಃ ಭೃತ್ಯಾಚಾರೋ ಪಂಚಾಚಾರಾಃ ಪ್ರಕೀರ್ತಿತಾಃ ||'' ತಮ್ಮಾಚಾರ ಗೃಹದಲ್ಲಿ ಕ್ರಿಯಾಭಾಂಡಂಗಳೊಳಗೆ ಶುಚಿರುಚಿಯಿಂದ ಗುರುಲಿಂಗಜಂಗಮಾರ್ಪಣಕ್ಕೆಂದು ಭಾವಭರಿತವಾಗಿ ಶೋಧಕತ್ವದಿಂದ ಮಂತ್ರಸ್ಮರಣೆಯಿಂದ ಪಾಕಂಗೈದು, ಮಧುರ ಒಗರು ಖಾರ ಆಮ್ಲ ಕಹಿ ಲವಣ ಮೊದಲಾದ ಷಡ್ರಸದ್ರವ್ಯಗಳ ಇಷ್ಟಲಿಂಗ ಬಾಹ್ಯರಿಗೆ ಹಾಕಲಾಗದು. ಅವರ ಕಣ್ಣಿಗೆ ದರ್ಶನದಿಂದ ಪಾಕದ ಭಾಂಡಗಳ ಕಾಣಗೊಡಲಾಗದು ಅವರ ಸಂಭಾಷಣೆಗಳಿಂದ ಪಾಕವ ಮಾಡಲಾಗದು ಭಕ್ತಲಿಂಗಜಂಗಮಕ್ಕೆ ಸಂಭಾಷಣೆಯಿಂದ ನೀಡಲಾಗದು. ತನ್ನ ಶ್ರೀಗುರು ಕರುಣಿಸಿದ ಲಿಂಗದೇವನ ನಿಮಿಷಾರ್ಧವಗಲಿರಲಾಗದು ಆ ಲಿಂಗವಲ್ಲದೆ ಅನ್ಯವಾಗಿ ಭೂಪ್ರತಿಷ್ಠಾದಿಗಳ ನೆನೆಯಲಾಗದು, ಅರ್ಚಿಸಲಾಗದು, ವಂದಿಸಲಾಗದು ಜಡನೇಮವ್ರತ ತಿಥಿ ಉಪವಾಸಗಳ ಮಾಡಲಾಗದು, ದೇಹ ದಂಡಿಸಿದೊಂದು ಕಾಯಕ ಬೇಡಿತಂದುದೊಂದು ಕಾಯಕವಲ್ಲದೆ ಅಕೃತ್ಯದಿಂದ ಕಿರಾತರಂತೆ ಗಳಿಕೆಗೊಳಗಾಗಲಾಗದು. ಶಿವಲಿಂಗಲಾಂಛನಕ್ಕೆ ಅನ್ನುದಕಾದಿವಸ್ತ್ರಪಾವುಡಗಳ ವಂಚಿಸಿ ವಿಷಯವ್ಯಸನಿಗಳಾಗಲಾಗದು. ಆಚಾರಬಾಹ್ಯವಾದ ನೀಚಾಶ್ರಯಗಳಲ್ಲಿರಲಾಗದು. ಸದಾಚಾರ ಭಕ್ತಗಣ ಗುರುಲಿಂಗಜಂಗಮಕ್ಕೆ ರಾಗದ್ವೇಷದಿಂದ ಗರ್ವಿಸಿ ನುಡಿಯಲಾಗದು. ಸರ್ವರು ಒಂದೊಡಲಾಗಿ ಲಿಂಗನಡೆ, ಲಿಂಗನುಡಿ, ದೃಢಚಿತ್ತದಿಂದ ಸರ್ವಭೋಗವ ನೀಗಿ, ಪಂಚಾಚಾರಬ್ರಹ್ಮವಾಗಿ, ಆರುವೈರಿಗಳಡಿಮೆಟ್ಟಿನಿಂದ ನಿಜ್ಯೋತ್ತಮರಿದೀಗ ತಮ್ಮ ತನುಸಂಬಂಧವಾದ ನಿಜಾಲಯಕ್ಕೆ ಯೋಗ್ಯವಾದ ಪಂಚಾಚಾರದಿರವು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.