Index   ವಚನ - 79    Search  
 
ಅನಾದಿ ಪ್ರಮಥಗಣನಾಯಕ ಶ್ರೀಗುರುಕರಜಾತ ತ್ರಿವಿಧೋದಕ ತ್ರಿವಿಧಪ್ರಸಾದಸ್ಥಲಸಂಬಂಧೋಪದೇಶ ಆಚಾರಭಕ್ತಗಣಾರಾಧ್ಯರಿಗೆ ಯೋಗ್ಯವುಳ್ಳ ಆಚರಣೆಯೆ ಪ್ರಾಣವಾದ ತ್ರಿವಿಧಾಚಾರ ಸೂತ್ರವದಕ್ಕೆ ಹರನಿರೂಪಣ ಸಾಕ್ಷಿ: ಕ್ರಿಯಾಚಾರೋ ಜ್ಞಾನಾಚಾರಃ ಭಾವಾಚಾರಸ್ತಥೈವ ಚ | ಸದಾ ಸನ್ಮಾರ್ಗಸಂಪೂಜ್ಯಂ ಆಚಾರಾಂಗಂ ಪ್ರಕೀರ್ತಿತಂ|| ಸರ್ವೇಂದ್ರಿಗಳಲ್ಲಿ ಆಹ್ವಾನಿಸುವ ಪರಿಣಾಮವೆಲ್ಲ ತ್ರಿಯಕ್ಷರಮೂರ್ತಿ ಇಷ್ಟಲಿಂಗದ ಸೊಮ್ಮು ಸಂತೋಷವೆಂದರಿದು ವಿಸರ್ಜಿಸುವ ಪರಿಣಾಮವೆಲ್ಲ ಪಂಚಾಕ್ಷರಮೂರ್ತಿ ಪ್ರಾಣಲಿಂಗದ ಸೊಮ್ಮುಸಂತೋಷವೆಂದರಿದು. ಈ ಎರಡರ ಪರಿಣಾಮವೆಲ್ಲ ಷಡಕ್ಷರಮೂರ್ತಿ ಭಾವಲಿಂಗದ ಸೊಮ್ಮು ಸಂತೋಷವೆಂದರಿದು, ತ್ರಿವಿಧಾಚಾರಲಿಂಗಮೂರ್ತಿ ತಾನೇ ತಾನಾಗಿ, ಜಾಗ್ರದಿಂದ ಕ್ರಿಯಾಘನಗುರುವಚನ ಪ್ರಮಾಣಸಾಕ್ಷಿಯಿಂದ, ಗುದ ಗುಹ್ಯದ ವಿಸರ್ಜನೆಗಳ ಬಿಡುಗಡೆಯ ಪರಿಣಾಮ ಪ್ರಕ್ಷಾಲ್ಯವೆ ಸಮ್ಯಜ್ಞಾನಾನಂದವಾಗಿ, ನಾಸಿಕ ಜಿಹ್ವೆಯ ವಿಸರ್ಜನೆಗಳ ಬಿಡುಗಡೆಯ ಪರಿಣಾಮ ಪ್ರಕ್ಷಾಲ್ಯವೆ ಸತ್ಕ್ರಿಯಾನಂದವಾಗಿ, ಇಷ್ಟಲಿಂಗಜಂಗಮದಾರ್ಚನೆಯರ್ಪಿತವಧಾನನುಭಾವಸುಖ ಸಮರತಿ ವಿಲಾಸದ ಪರಿಣಾಮದಾಹ್ವಾನವೆ ಸಮ್ಯಜ್ಞಾನಾನಂದವಾಗಿ, ಗುದಗುಹ್ಯಗಳೆರಡು ಕ್ರಿಯಾಶಕ್ತಿ ಜ್ಞಾನಶಕ್ತಿಸ್ವರೂಪವೆನಿಸಿ, ಪ್ರಮಥಗಣ ಒಪ್ಪಿ ಸೊಪ್ಪಡಗಿದ ನಿಃಪತಿಯನೈದುವದೆ ಮುಕ್ತಿಸ್ವರೂಪವು. ಇಷ್ಟಲಿಂಗ ಜಂಗಮರೊಪ್ಪಿತದ ಸುಗಂಧ ಸುರಸದ್ರವ್ಯಗಳ ಪವಿತ್ರ ಮುಖವನರಿದು, ಮಂತ್ರಾಹ್ವಾನದ ನಿಜನಿಷ್ಠೆಯಗಲದೆ, ಅಲ್ಲಿ ತಟ್ಟಿಮುಟ್ಟುವ ಕಾಯದ ಕೈಯ ಸುಚಿತ್ತ ಸುಬುದ್ಧಿಯ ಪರಿಣಾಮವೆಲ್ಲ ಸತ್ಕ್ರಿಯಾನಂದವಾಗಿ, ಇವು ನಾಲ್ಕು ಇಷ್ಟಲಿಂಗಾಲಯವೆಂದರಿದು, ಗುರುಪೀಠದಾಧಾರ ಸ್ವಾಧಿಷ್ಠಾನದ ಕ್ರಿಯಾಚಾರದ ಮನೆ ಕಾಣಿರಣ್ಣಗಳಿರ. ಅಲ್ಲಿಂದ ಪಾದ ಪಾಣಿಗಳ ತಟ್ಟುಮುಟ್ಟಿನ ವಿಸರ್ಜನೆಗಳ ಪ್ರಕ್ಷಾಲ್ಯದ ಪರಿಣಾಮವೆ ಸಮ್ಯಜ್ಞಾನಾನಂದವಾಗಿ ನೇತ್ರ ತ್ವಗೇಂದ್ರಿಯದ ವಿಸರ್ಜನೆಗಳ ಪ್ರಕ್ಷಾಲ್ಯದ ಪರಿಣಾಮವೆ ಸತ್ಕ್ರಿಯಾನಂದವಾಗಿ, ಪಾದ ಪಾಣಿಗಳೆರಡು ಇಚ್ಛಾಶಕ್ತಿ ಆದಿಶಕ್ತಿಸ್ವರೂಪವೆನಿಸಿ, ಪ್ರಮಥಗಣ ಒಪ್ಪಿ ಪರಮಾನಂದವನೈದುವುದೆ ಮುಕ್ತಿಸ್ವರೂಪವು. ಇಷ್ಟಲಿಂಗ ಜಂಗಮಾರೋಪಿತದ ಸುರೂಪು ಸುಸ್ಪರಿಶನದ್ರವ್ಯಗಳ ಪವಿತ್ರಮುಖವನರಿದು, ನಿಜದೃಷ್ಟಿ ಮಂತ್ರಾಹ್ವಾನದ ಪರಿಪೂರ್ಣನೈಷ್ಠೆಯಗಲದೆ, ಅಲ್ಲಿ ತಟ್ಟು ಮುಟ್ಟುವ ಕಾಯಕದ ಕೈಯ ನಿರಹಂಕಾರ ಸುಮನದ ಪರಿಣಾಮವೆಲ್ಲ ಸತ್ಕ್ರಿಯಾನಂದವಾಗಿ ಇವು ನಾಲ್ಕು ಪ್ರಾಣಲಿಂಗಾಲಯವೆಂದರಿದು, ಚರಪೀಠದ ಮಣಿಪೂರಕನಾಹತದ ಜ್ಞಾನಾಚಾರದ ಮನೆಯ ಕಾಣಿರಣ್ಣಗಳಿರಾ. ಅಲ್ಲಿಂದ ವಾಕು ಪಾಯುವಿನ ದುಃಕೃತದ ತಟ್ಟುಮುಟ್ಟಿನ ವಿಸರ್ಜನೆಗಳ ಪರಮಾನಂದ ಚಿಜ್ಜಲದಿಂ ಪ್ರಕ್ಷಾಲ್ಯದ ಪರಿಣಾಮವೆ ಸಮ್ಯಜ್ಞಾನಾನಂದವಾಗಿ, ಶ್ರೋತ್ರದ ಶಬ್ದದ ದುಃಕೃತ್ಯದ ತಟ್ಟುಮುಟ್ಟಿನ ವಿಸರ್ಜನೆಗಳ ಪರಿಪೂರ್ಣಾನಂದಜಲದಿಂ ಪ್ರಕ್ಷಾಲ್ಯದ ಪರಿಣಾಮವೆ ಸತ್ಕ್ರಿಯಾನಂದವಾಗಿ, ವಾಕು ಪಾಯುಗಳೆರಡು ಪರಶಕ್ತಿ ಚಿಚ್ಛಕ್ತಿ ಸ್ವರೂಪವೆನಿಸಿ, ಪ್ರಮಥಗಣ ಒಪ್ಪಿ, ಪರಮಾನಂದವನೈದುವುದೆ ಮುಕ್ತಿಸ್ವರೂಪವು. ಇಷ್ಟಲಿಂಗ ಜಂಗಮಾರೋಪಿತದ ಸುಶಬ್ದ ಸುತೃಪ್ತಿದ್ರವ್ಯಗಳ ಪವಿತ್ರಮುಖವನರಿದು, ಪರನಾದ ಬಿಂದು ಕಳೆಗಳ ಮಂತ್ರಜ್ಞಾನದ ಪರಿಪೂರ್ಣನೈಷ್ಠೆಯಗಲದೆ, ಅಲ್ಲಿ ತಟ್ಟುಮುಟ್ಟುವ ಕಾಯದ ಕೈಯಲ್ಲಿ ಸುಜ್ಞಾನ ಸದ್ಭಾವದ ಪರಿಣಾಮವೆಲ್ಲ ಸತ್ಕ್ರಿಯಾನಂದವಾಗಿ, ಇವು ನಾಲ್ಕು ಭಾವಲಿಂಗಾಲಯವೆಂದರಿದು, ಪರಪೀಠದ ವಿಶುದ್ಧಿ ಆಜ್ಞಾಮಂಟಪ ಶೂನ್ಯಸಿಂಹಾಸನದ ಭಾವದಾಚಾರದ ಮನೆ ಕಾಣಿರಣ್ಣಗಳಿರಾ. ಇಂತೆಸೆವ ತ್ರಿವಿಧಾಚಾರಸಂಪನ್ನರೆ ಕೂಡೊಂದೊಡಲಾಗಿ, ಮನದ ಮಾಯಾಪಾಶವ ಕಡಿದು ಖಂಡ್ರಿಸುತ್ತ, ತಮ್ಮ ತಾವರಿದು, ನಡೆನುಡಿ ಒಂದಾಗಿ ಮಾಯಾಭೋಗಾಪೇಕ್ಷೆಯ ನೆರೆ ನೀಗಿ, ತ್ರಿವಿಧಾಚಾರಬ್ರಹ್ಮವಾಗಿ ತ್ರಿಗುಣಗಳಡಿಮೆಟ್ಟಿ ನಿಂದ ನಿಜೋತ್ತಮರಿಗಿದೀಗ ತಮ್ಮ ಮನಸಂಬಂಧವಾದ ನಿಜಾಲಯಕ್ಕೆ ಯೋಗ್ಯವಾದ ತ್ರಿವಿಧಾಚಾರದಿರವು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.