ವಚನ - 111     
 
ನೀರ ನೆಳಲನೆ ಕಡಿದು, ಮೇರುವೆಂಬುದ ನುಂಗಿ, ಶಾರದೆಯೆಂಬವಳ ಬಾಯ ಕಟ್ಟಿ, ಕಾರ ಮೇಘದ ಬೆಳಸ ನೀರ ಹರಿ ನುಂಗಲು ದಾರಿ ಮೃತ್ಯುವ ನುಂಗಿ ನಗುತ್ತಿದ್ದಿತು. ನಾರಿಯ ಬೆನ್ನ ಮೇಲೆ ಗಂಡ ಬಂದು ಕುಳ್ಳಿರಲು, ನೀರ ಹೊಳೆಯವರೆಲ್ಲರ ಕೊಡನೊಡೆದವು. ಕಾರೆಯ ಮುಳ್ಳೆರ್ದು ಕಲಿಗಳನಟ್ಟಿ ಸದೆವಾಗ, ಸೋರುಮುಡಿಯಾಕೆ ಗೊರವನ ನೆರೆದಳು. ಬಳ್ಳು ಆನೆಯ ನುಂಗಿ, ಒಳ್ಳೆ ಸಮುದ್ರವ ಕುಡಿದು, ಕುಳ್ಳಿರ್ದ ಶಿಶು ಹಲಬರನೆಯ್ದೆ ನುಂಗಿ, ಅತ್ತೆ ಅಳಿಯನ ಕೂಡಿ ಕೋಡಗವ ಹಡೆದಲ್ಲಿ, ಹತ್ತಿರಿರ್ದ ಹಾವಾಡಿಗನನು ಅದು ನುಂಗಿತ್ತು! ಕಪ್ಪೆ ಸರ್ಪನ ಹಿಡಿದು ಒತ್ತಿ ನುಂಗುವಾಗ, ಕಪ್ಪೆಯ ಕೊರಳಲ್ಲಿ ಬಿಳಿದು ಕೆಂಪಡರಲು, ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ, ಕಟ್ಟಿದಿರ ಕರ್ಪುರದ ಜ್ಯೋತಿಯಂತೆ!