Index   ವಚನ - 81    Search  
 
ಸರ್ವಾಂಗಲಿಂಗಸಂಬಂಧವಾದ ಶಿವಯೋಗೀಶ್ವರರು ವೈರಿಗಳಡಿಮೆಟ್ಟಿ, ಷಡೂರ್ಮಿ, ಷಡ್ಭ್ರಮೆ, ಷಡ್ಭಾವವಿಕಾರಮಂ ಕಡೆಗೊದೆದು, ಷಟ್ಸ್ಥಲಮಾರ್ಗದಲ್ಲಿ ನೆರೆನಂಬ ಅಷ್ಟಾವರಣದವಧಾನದಿಂದ ಪಾವನಾರ್ಥವಾಗಿ ತನುವಿನಲ್ಲಿ ಸದ್ರೂಪವಾದ ಗುರು, ಮನದಲ್ಲಿ ಚಿದ್ರೂಪವಾದ ಲಿಂಗ, ಭಾವದಲ್ಲಿ ಆನಂದಸ್ವರೂಪವಾದ ಜಂಗಮ, ಜಿಹ್ವಾಗ್ರದಲ್ಲಿ ನಿತ್ಯವಾದ ಪಾದೋದಕ ನಾಸಿಕದಲ್ಲಿ ಪರಿಪೂರ್ಣವಾದ ಪ್ರಸಾದ, ತ್ವಕ್ಕಿನಲ್ಲಿ ಅವಿರಳವಾದ ಚಿದ್ವಿಭೂತಿ, ಕಂಗಳ ಪರಂಜ್ಯೋತಿ ಚಿದ್ರುದ್ರಾಕ್ಷಿ, ಶ್ರೋತ್ರಂಗಳಲ್ಲಿ ಪರನಾದಬ್ರಹ್ಮಮೂರ್ತಿ ಚಿನ್ನಾದ ಬಿಂದು ಕಳಾಮಂತ್ರಮಂ ಧಾರಣಂಗೈದು ತನುವೆಂಬ ಕ್ರಿಯಾಲಯಕ್ಕೆ ಇಷ್ಟಲಿಂಗಪಂಚಾಚಾರಮಂ ತಳೆದೊಪ್ಪಿ ಮನವೆಂಬ ಜ್ಞಾನಾಲಯಕ್ಕೆ ಪ್ರಾಣಲಿಂಗದ ತ್ರಿವಿಧಾಚಾರಮಂ ತಳೆದೊಪ್ಪಿ ಭಾವವೆಂಬ ಪರಿಪೂರ್ಣಾಲಯಕ್ಕೆ ಭಾವಲಿಂಗದ ತ್ರಿವಿಧಾಚಾರಮಂ ತಳೆದೊಪ್ಪಿ ಸರ್ವಾವಸ್ಥೆಗಳಲ್ಲಿ ಮಹದರುವಿನ ನಿಜಾನುಭಾವದ ಚಿದ್ಬೆಳಗೆ ಸರ್ವಾಚಾರಸಂಪತ್ತಿನಿರವೆಂದು ಹೊಳೆವ ಶರಣನೆ ನಿಜಮೋಕ್ಷಸ್ವರೂಪ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.