Index   ವಚನ - 84    Search  
 
ಚಿದಾವರಣಮೂರ್ತಿ ನಿಜಜಂಗಮಲಿಂಗದೇವರು, ತಾನು ಪರಿಣಾಮತೃಪ್ತನೆನಿಸಿ ನಿಂದನಿರಾವಲಂಬಸ್ಥಾನವಾವುದೆಂದೊಡೆ: ನಿಜವೀರಶೈವ ಭಕ್ತಿಜ್ಞಾನವೈರಾಗ್ಯ ಷಟ್ಸ್ಥಲಾನುಭಾವ ಶ್ರೀಗುರುಲಿಂಗಜಂಗಮದ ನಿಜಕರಣಾನಂದದ ಚಿತ್ಪ್ರಭಾಪುಂಜರಂಜಿತವಾದ ನಿಜಕಿರಣವೆ ಕಾಯ ಕರಣ ಭಾವ ಬಯಲಾಗುವುದಕ್ಕೆ ಕದಳಿಯ ಬೆಳಗಿದೆ ನಿಜಮೋಕ್ಷದ ಮನೆಯೆಂದರಿದು, ನಡೆ-ನುಡಿ ಒಂದಾಗಿ, ಪೂರ್ವಪುರಾತನ ವಚನಸಾರಾಮೃತವಿಡಿದು ಸರ್ವಾಚಾರಸಂಪನ್ನನಾದ ಸದ್ಭಕ್ತನಾಶ್ರೈಸಿದ ಚಿತ್ಪೃಥ್ವಿ ಚಿದಪ್ಪು ಚಿದಗ್ನಿ ಚಿದ್ವಾಯು ಚಿದಾಕಾಶ ಚಿಚ್ಛಕ್ತಿ ಚಿತ್ತ್ಪುತ್ರ ಮಿತ್ರ ಕಳತ್ರಯಾದಿಯಾಧಾರಮೂರ್ತಿ ಚಿದ್ಘನಲಿಂಗಮೂರ್ತಿ, ಲಿಂಗಾಚಾರವಿರತಿಯ ಭಕ್ತಿಯೆಂಬ ಮೋಹಾನಂದವೆ ನಿಜಮೋಕ್ಷದ ಖಣಿಯೆಂದು ನೆರೆನಂಬಿ ಅಚಲಾನಂದದಿಂದ ಮಹಾಜ್ಞಾನಭಕ್ತಿರತಿಯಿಟ್ಟು ಒಳಹೊರಗೊಂದಾಗಿ, ಚಿನ್ನಾದ ಚಿದ್ಬಿಂದು ಚಿತ್ಕಳಾಮಂತ್ರಮಂ ಧ್ಯಾನಿಸುತ್ತ ಸರ್ವಮಯಮಂತ್ರವೆಂಬ ದೃಢಲಿಂಗಮಂ ನೋಡುತ್ತ, ಲಿಂಗಮಂ ಕೂಡುತ್ತ, ಘನಲಿಂಗಾಂಗದೊಳ್ ಮಾತಾಡುತ್ತ, ತಾನೆ ತಾನಾಗಿ ತನಗೊಂದಾಶ್ರಯವಿಲ್ಲದಿಪ್ಪುದೆ ನಿಜಜಂಗಮದಿರವು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.