Index   ವಚನ - 83    Search  
 
ಪರಿಪೂರ್ಣಜ್ಞಾನಾನುಭಾವ ತಲೆದೊರಿ, ತಾನು ತಾನಾದ ಶರಣಗಣಾರಾಧ್ಯ ಜಂಗಮಭಕ್ತರೊಂದಾದ ನಿಲುಕಡೆಯೆಂತೆಂದೊಡೆ: ಜ್ಯೋತಿ ಜ್ಯೋತಿ ಬೆರದಂತೆ, ಉದಕ ಉದಕ ಒಂದಾದಂತೆ, ಕ್ಷೀರ ಕ್ಷೀರ ಕೂಡಿ ಒಂದೊಡಲಾಗಿ ಪರವನೈದಿದೋಪಾದಿಯಲ್ಲಿ, ತನುವಿನಲ್ಲಿ ತನು ಬೆರೆದು, ಮನದಲ್ಲಿ ಮನ ಬೆರೆದು, ಧನದಲ್ಲಿ ಧನ ಬೆರೆದು, ನೆನಹಿನಲ್ಲಿ ನೆನಹು ಬೆರೆದು, ಭೋಗದಲ್ಲಿ ಭೋಗ ಬೆರೆದು, ಯೋಗದಲ್ಲಿ ಯೋಗ ಬೆರೆದು, ಭಕ್ತಿಯಲ್ಲಿ ಭಕ್ತಿ ಬೆರೆದು, ವಿರಕ್ತಿಯಲ್ಲಿ ವಿರಕ್ತಿ ಬೆರೆದು, ಕ್ರಿಯಾಚಾರದಲ್ಲಿ ಕ್ರಿಯಾಚಾರ ಬೆರೆದು, ಜ್ಞಾನಾಚಾರದಲ್ಲಿ ಜ್ಞಾನಾಚಾರ ಬೆರೆದು, ಭಾವಾಚಾರದಲ್ಲಿ ಭಾವಾಚಾರ ಬೆರೆದು, ನಡೆಯಲ್ಲಿ ನಡೆ ಬೆರೆದು, ನುಡಿಯಲ್ಲಿ ನುಡಿ ಬೆರೆದು, ದೃಢದಲ್ಲಿ ದೃಢ ಬೆರೆದು, ಸಡಗರಸಂಪದದಲ್ಲಿ ಸಡಗರ ಸಂಪದಬೆರೆದು, ಮಾತು ಮರವೆಯ ಪರಿಧಿಯ ಹರಿದು ಭವಸಮುದ್ರವ ದಾಂಟಿ, ಭಕ್ತನಲ್ಲಿ ಜಂಗಮರತಿಯಿಟ್ಟು, ಪರಮವಿರತಿಯಿಂದ ಸಾಕಾರ ನಿರಾಕಾರ ನಿರವಯಮಂ ಭೇದಿಸಿ, ಆಚರಣೆ ಸಂಬಂಧಮಂ ಖಂಡಿಸಿ, ಪಿಂಡಬ್ರಹ್ಮಾಂಡದ ತೊಡಕು ವಿರಹಿತರಾಗಿ, ಶೂನ್ಯ ಶೂನ್ಯದಲ್ಲಿ ಲಯವೆನಿಸಿ, ನಿರಾಕಾರ ನಿರಾಕಾರದಲ್ಲಿ ಶೂನ್ಯವೆನಿಸಿ, ನಿರವಯ ನಿರವಯದಲ್ಲಿ ಶೂನ್ಯವೆನಿಸಿ, ತಾನೇ ತಾನಾದ ಚಿದ್ಭ್ರಹ್ಮದ ಬೆಳಗಿನಿರವ ಉಪಮಿಸಬಾರದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.