Index   ವಚನ - 86    Search  
 
ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರಹೇಯಸ್ಥಲ, ಗುರುಕರುಣಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿಸ್ಥಲ, ಪಂಚಾಕ್ಷರಿಸ್ಥಲ, ಭಕ್ತಿಸ್ಥಲ, ಉಭಯಸ್ಥಲ, ತ್ರಿವಿಧ ಸಂಪದಸ್ಥಲ, ಚತುರ್ವಿಧಸಾರಾಯಸ್ಥಲ, ಉಪಾಧಿಮಾಟಸ್ಥಲ, ನಿರೂಪಾಧಿಮಾಟಸ್ಥಲ, ಸಹಜಮಾಟಸ್ಥಲ, ಮಹೇಶ್ವರಸ್ಥಲ, ಲಿಂಗನಿಷ್ಠಾಸ್ಥಲ, ಪೂರ್ವಾಶ್ರಯನಿರಸನಸ್ಥಲ, ವಾಗದ್ವೈತ ನಿರಸನಸ್ಥಲ, ಆಹ್ವಾನನಿರಸನಸ್ಥಲ, ಅಷ್ಟತನುಮೂರ್ತಿನಿರಸನಸ್ಥಲ, ಸರ್ವಗತನಿರಸನಸ್ಥಲ, ಶಿವಜಗನ್ಮಯಸ್ಥಲ, ಭಕ್ತದೇಹಿಕಲಿಂಗಸ್ಥಲ- ಎಂಬ ಇಪ್ಪತ್ತುನಾಲ್ಕು ಸ್ಥಲಂಗಳನ್ನು ಆಚಾರಾಂಗಸ್ವರೂಪದ ಭಕ್ತ, ಗೌರವಾಂಗಸ್ವರೂಪದ ಮಹೇಶ್ವರ, ತ್ಯಾಗಾಂಗಸ್ಥಲವನೊಳಕೊಂಡು, ಗುರುವಿನಲ್ಲಿ ತಿಳಿದು, ಆ ಗುರುವನೆ ಅರುವಿನಲ್ಲಿ ಕಂಡು, ಆ ಅರುವನೆ ಕ್ರಿಯಾಮಂಡಲಂಗಳಲ್ಲಿ ತರಹರವಾಗಿ ಅಲ್ಲಿಂದ ದೀಕ್ಷಾಗುರುಸ್ಥಲ, ಶಿಕ್ಷಾಗುರುಸ್ಥಲ, ಜ್ಞಾನಗುರುಸ್ಥಲ, ಕ್ರಿಯಾಲಿಂಗಸ್ಥಲ, ಜ್ಞಾನಲಿಂಗಸ್ಥಲ, ಭಾವಲಿಂಗಸ್ಥಲ, ಸ್ವಯಸ್ಥಲ, ಚರಸ್ಥಲ, ಪರಸ್ಥಲ, ಕ್ರಿಯಾಗಮಸ್ಥಲ, ಭಾವಾಚಾರಸ್ಥಲ, ಸ್ವಕಾಯಸ್ಥಲ, ಪರಕಾಯಸ್ಥಲ, ಧರ್ಮಾಚಾರಸ್ಥಲ, ಭಾವಾಚಾರಸ್ಥಲ, ಜ್ಞಾನಾಚಾರಸ್ಥಲವೆಂಬ ಹದಿನೆಂಟು ಸ್ಥಲಗಳನ್ನು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು ಪರಿಶೋಭಿಸುವಂಥ ಆಚಾರಲಿಂಗ, ಮೂವತ್ತಾರು ಸಕೀಲಂಗಳನೊಳಕೊಂಡು ಪರಿಶೋಭಿಸುವಂಥ ಗುರುಲಿಂಗ, ಭಾವಾಭಾವಸ್ಥಲವನೊಳಕೊಂಡು ನಿಃಕಳಲಿಂಗದಲ್ಲಿ ತಿಳಿದು ಆ ನಿಃಕಳಬ್ರಹ್ಮವೆ ತಾನೆ ತಾನಾಗಿ, ಮೂವತ್ತಾರು ಚಿತ್ಪಾದೋದಕ ಪ್ರಸಾದ ಪ್ರಣಮಂಗಳೆಂಬ ಮೂಲಮಂತ್ರಸ್ವರೂಪನಾಗಿ ವಿರಾಜಿಸುವಾತನೆ ಸತ್ಕ್ರಿಯಾಜಂಗಮಭಕ್ತನಾದ ಸಾಕಾರಮೂರ್ತಿ ಇರವು ನೋಡಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.