Index   ವಚನ - 89    Search  
 
ತನುತ್ರಯಮಂಡಲಂಗಳಲ್ಲಿ ಸಕಲವ್ಯಾಪಾರದೊಡನೆ ಕೂಡಿ ವರ್ತಿಸುವಂಥ ಜಾಗ್ರನ ನಿಜವಿಶ್ವಾಸವೆಂಬ ಹೃತ್ಪೀಠಮಧ್ಯದಲ್ಲಿ ಮೂರ್ತಿಗೊಂಡಿರುವ ನಿಃಕಲಬ್ರಹ್ಮ ಇಷ್ಟಲಿಂಗದೇವನ ನಿಃಕಳಂಕಹಸ್ತದಲ್ಲಿ ಮೂರ್ತಿಗೊಳಿಸಿ, ಸಾಕಾರವಾದಷ್ಟವಿಧಾರ್ಚನೆ ಷೋಡಶೋಪಚಾರದಿಂದರ್ಚಿಸಿ, ಎರಡಳಿದು ತಾನೇ ತಾನಾಗಿ, ಮಿಶ್ರಾನಂದಭೋಗದಿಂದ ಅಚಲಾನಂದನಾಗಿ, ಅಲ್ಲಿಂದ ನೂರೆಂಟು ಕ್ರಿಯಾಪ್ರಣಮ ಜಪಮಾಲೆಯಂ ಜಪಮಣಿಗಳಿಂ ಧ್ಯಾನಿಸಿ ನಿಜಜಂಗಮಲಿಂಗದಲ್ಲೊಡವೆರೆದು, ಭಕ್ತಿಯುಕ್ತಿಶ್ರದ್ಧಾತುರ ಕಿಂಕುರ್ವಾಣದಿಂದ ಸತ್ಯಶುದ್ಧ ನಡೆನುಡಿ ದೃಢಚಿತ್ತಮಂ ಸಾಧಿಸುತ್ತ, ಗುರುಮಾರ್ಗಾಚಾರಸಂಪದಮಂ ಭೇದಿಸುತ್ತ, ಆ ನಿಃಕಲಬ್ರಹ್ಮವಪ್ಪ ಇಷ್ಟಲಿಂಗದೇವನ ಕಂಗಳು ತುಂಬಿ, ಮೂಲಚಿತ್ಪ್ರಭೆಗಳ ನೋಡುತ್ತ, ಘನಮನದ ಕೊನೆಯಲ್ಲಿ ತುಂಬಿ ತೊನೆಯುತ್ತ ತೂಗುತ್ತ, ಸ್ವಾನುಭಾವದಲ್ಲಿ ಸಂತೃಪ್ತನಾಗುತ್ತ, ಬೆಳಗಿನೊಳಗೆ ಮಹಾಬೆಳಗಾಗಿ, ಅರುಣೋದಯವೆ ಮೊದಲುವಿಡಿದು, ಇಪ್ಪತ್ತು ಗಳಿಗೆ ಪರಿಯಂತರವು ಸುಚಿತ್ತದ ಕೊನೆಯಲ್ಲಿ ಅನಾದಿಮೂಲಪ್ರಣಮ ಒಂದು, ಪಾದೋದಕಪ್ರಣಮ ಎರಡು, ಪ್ರಸಾದಪ್ರಣಮ ಎರಡು ಕೂಡಲಾಗಿ, ಚಿತ್ಕಲಾಪ್ರಸಾದಪ್ರಣಮ ಒಂದು ಕೂಡಲಾಗಿ, ಗುರುಪಂಚಾಕ್ಷರವೆನಿಸುವುದು. ಆಚಾರಲಿಂಗ ಗುರುಲಿಂಗ ಇಷ್ಟಲಿಂಗಾಯ ನಮಃ ನಿಮಗೆ ಸಮರ್ಪಣವಯ್ಯಾ ಎಂದು, ಮೂಲಚಿತ್ತುವಿನಿಂದ ಧ್ಯಾನಿಸುತ್ತ, ಅಲ್ಲಿಂದ ಮತ್ತಿಪ್ಪತ್ತು ಗಳಿಗೆ ಪರಿಯಂತರವು ಸುಮನದಕೊನೆಯಲ್ಲಿ ಅನಾದಿಮೂಲಪ್ರಣಮವಿಡಿದು, ಎರಡನೆಯ ಸಂಬಂಧವಾದ ಪಾದೋದಕಪ್ರಣಮ ಎರಡು, ಪ್ರಸಾದಪ್ರಣಮ ಎರಡು, ಚಿತ್ಕಲಾಪ್ರಸಾದಪ್ರಣಮ ಒಂದು ಕೂಡಲಾಗಿ ಶಿವಪಂಚಾಕ್ಷರವೆನಿಸುವುದು. ಶಿವಲಿಂಗ ಜಂಗಮಲಿಂಗ ಪ್ರಾಣಲಿಂಗಾಯ ನಮಃ ನಿಮಗೆ ಸಮರ್ಪಣವಯ್ಯಾ ಎಂದು, ಮೂಲಚಿತ್ತುವಿನಿಂದ ಧ್ಯಾನಿಸುತ್ತ, ಅಲ್ಲಿಂದ ಮತ್ತಿಪ್ಪತ್ತು ಗಳಿಗೆ ಪರಿಯಂತರವು ಸ್ವಾನುಭಾವದ ಕೊನೆಯಲ್ಲಿ ಅನಾದಿಮೂಲಪ್ರಣಮವಿಡಿದು ಮೂರನೆಯ ಸಂಬಂಧವಾದ ಪಾದೋದಕಪ್ರಣಮ ಎರಡು, ಪ್ರಸಾದಪ್ರಣಮ ಎರಡು, ಚಿತ್ಕಲಾಪ್ರಸಾದಪ್ರಣಮ ಒಂದು ಕೂಡಲಾಗಿ ಹರಪಂಚಾಕ್ಷರವೆನಿಸುವುದು. ಪ್ರಸಾದಲಿಂಗ ಮಹಾಲಿಂಗ ಭಾವಲಿಂಗಾಯ ನಮಃ ನಿಮಗೆ ಸಮರ್ಪಣವಯ್ಯಾ ಎಂದು ಮೂಲಚಿತ್ತುವಿನಿಂದ ಧ್ಯಾನಿಸುತ್ತ, ಘನಕ್ಕೆಘನವಾಗಿ ಮಹದರುವಿನ ಕೊನೆಯಲ್ಲಿ ಧ್ಯಾನಿಸುತ್ತ, ಧ್ಯಾನಿಸಿದಲ್ಲಿ ದಿನರಾತ್ರಿಗಳೆರಡಕ್ಕೆ ಅರವತ್ತು ಗಳಿಗೆಯಾಗುವುದು. ಜಪ ಇಪ್ಪತೊಂದುಸಾವಿರದಾರುನೂರಾಗುವದು. ಇದೇ ಸಗುಣಾನಂದ ಸಾಕಾರ ಜಪವೆನಿಸುವುದು. ಇದೆ ಶರಣಸನ್ಮಾರ್ಗದ ನಿಜಪಂಚಾಕ್ಷರವೆನಿಸುವುದು. ಇದೆ ನಿಜಜಂಗಮ ಭಕ್ತಗಣಾರಾಧ್ಯರ ಇರವು ಕಾಣಾ, ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.