Index   ವಚನ - 88    Search  
 
ಶರಣಸ್ಥಲ, ತಾಮಸನಿರಸನಸ್ಥಲ, ನಿರ್ದೇಶನಸ್ಥಲ, ಶೀಲಸಂಪಾದನಸ್ಥಲ, ಐಕ್ಯಸ್ಥಲ, ಸರ್ವಾಚಾರಸಂಪತ್ತಿನಸ್ಥಲ, ಏಕಭಾಜನಸ್ಥಲ, ಸಹಭೋಜನಸ್ಥಲಯೆಂಬ ಎಂಟು ಸ್ಥಲಂಗಳನ್ನು ಶೇಷಾಂಗಸ್ವರೂಪವಾದ ಶರಣ ಮಹದಂಗಸ್ವರೂಪವಾದೈಕ್ಯ ಯೋಗಾಂಗಸ್ಥಲವನೊಳಕೊಂಡು ಜಂಗಮದಲ್ಲಿ ತಿಳಿದು, ಆ ಜಂಗಮವ ಪರಿಪೂರ್ಣಜ್ಞಾನಾನುಭಾವದಲ್ಲಿ ಕಂಡು, ಆ ಪರಿಪೂರ್ಣಜ್ಞಾನಾನುಭಾವವನೆ ಮಹಾಜ್ಞಾನಮಂಡಲಂಗಳಲ್ಲಿ ತರಹರವಾಗಿ ಅಲ್ಲಿಂದ ದೀಕ್ಷಾಪಾದೋದಕಸ್ಥಲ, ಶಿಕ್ಷಾಪಾದೋದಕಸ್ಥಲ, ಜ್ಞಾನಪಾದೋದಕಸ್ಥಲ, ಕ್ರಿಯಾನಿಷ್ಪತ್ತಿಸ್ಥಲ, ಭಾವನಿಷ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ, ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹದಾಕಾಶಸ್ಥಲ, ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶಸ್ಥಲ, ಜ್ಞಾನಪ್ರಕಾಶಸ್ಥಲ, ಕೊಂಡುದು ಪ್ರಸಾದಿಸ್ಥಲ, ನಿಂದುದು ಓಗರಸ್ಥಲ, ಚರಾಚರನಾಸ್ತಿಸ್ಥಲ, ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲವೆಂಬ ಹದಿನೆಂಟುಸ್ಥಲಂಗಳನ್ನು ಮೂವತ್ತಾರು ಸಕೀಲಂಗಳನೊಳಕೊಂಡು ಪರಿಶೋಭಿಸುವಂಥ ಮಹಾಲಿಂಗ. ಜ್ಞಾನಶೂನ್ಯಸ್ಥಲವನೊಳಕೊಂಡು, ನಿರಂಜನಲಿಂಗದಲ್ಲಿ ತಿಳಿದು, ಆ ನಿರಂಜನಬ್ರಹ್ಮವೇ ತಾನೇ ತಾನಾಗಿ, ಮೂವತ್ತಾರು ಚಿತ್ಪಾದೋದಕಪ್ರಸಾದಪ್ರಣಮಂಗಳೆಂಬ ಮೂಲಮಂತ್ರಸ್ವರೂಪನಾಗಿ ವಿರಾಜಿಸುವಾತನೆ ಪರಿಪೂರ್ಣಾನುಭಾವಜಂಗಮಭಕ್ತನಾದ ನಿರವಯಮೂರ್ತಿಯಿರವು ಕಾಣಾ ನಿರವಯಪ್ರಭು ಮಹಾಂತ ಸಿದ್ದಮಲ್ಲಿಕಾರ್ಜುನಲಿಂಗೇಶ್ವರ.