Index   ವಚನ - 91    Search  
 
ಆತ್ಮತ್ರಯಮಂಡಲಗಳಲ್ಲಿ ನಿರಾವಲಂಬವ್ಯಾಪಾರದೊಡನೆ ಕೂಡಿ ವರ್ತಿಸುವಂಥ ಸುಷುಪ್ತನ ನಿಜವಿಶ್ವಾಸವೆಂಬ ಹೃತ್ಪೀಠಮಧ್ಯದಲ್ಲಿ ಮೂರ್ತಿಗೊಂಡಿರುವ ನಿರಂಜನಹಸ್ತದಲ್ಲಿ ಭಾವಲಿಂಗದೇವನ, ನಿರಂಜನಹಸ್ತದಲ್ಲಿ ಮೂರ್ತಿಗೊಳಿಸಿ ನಿರವಯವಾದಷ್ಟವಿಧಾರ್ಚನೆ ಷೋಡಶೋಪಚಾರದಿಂದರ್ಚಿಸಿ, ಎರಡಳಿದು ತಾನೇ ತಾನಾಗಿ, ಘನಪರಿಪೂರ್ಣ ಮಿಶ್ರಾನಂದಭೋಗದಿಂದ ನಿಶ್ಚಿತಾನಂದನಾಗಿ, ಅಲ್ಲಿಂದ ಆ ಜಾಗ್ರಸ್ವಪ್ನದಧಿಕಾರಿಗಳಾದ ಇಷ್ಟಲಿಂಗ ಪ್ರಾಣಲಿಂಗದೇವರ ಪರಮಾನಂದ ಪರಿಪೂರ್ಣಬೆಳಗಿನ ಸಚ್ಚಿದಾನಂದ ಸಂತೃಪ್ತಿಗೆ ತಾನೆ ಕಾರಣವಾಗಿ ವಿರಾಜಿಸುವಂಥ, ಆ ಭಾವಲಿಂಗದೇವನ ಇಷ್ಟಲಿಂಗದ ನವತಾರಕಸ್ಥಾನ ಪ್ರಾಣಲಿಂಗದ ನವತಾರಕಸ್ಥಾನದ ಕೊನೆಮೊನೆಯೆಂಬ ಪಶ್ಚಿಮಾದ್ರಿ ನವರತ್ನಖಚಿತ ಶೂನ್ಯಸಿಂಹಾಸನದಲ್ಲಿ ಪರಿಪೂರ್ಣಾನುಭಾವದಿಂ ಮೂರ್ತಿಗೊಳಿಸಿದ ಚಿತ್ಪ್ರಭಾಮಂಡಲದ ಮಹಾಬೆಳಗಿನ ತಿಳುಹಿನಲ್ಲಿ ಏಕಲಿಂಗನಿಷ್ಠಾಪರದಿಂದ ನಿಂದು ಐವತ್ತಕ್ಷರಸ್ವರೂಪವಾದ ಲಿಂಗಮಂತ್ರಗಳ ಚಿತ್ಪಾದೋದಕ ಚಿತ್ಪ್ರಸಾದಂಗಳಿರವ ತಿಳಿದು, ತನ್ನ ನಿಜ ಘನಮನೋಲ್ಲಾಸದಿರವು ಹೇಂಗೆ ತೋರಿತ್ತು ಹಾಂಗೆ ಪ್ರಣಮಲಿಂಗಂಗಳಲ್ಲಿ ತರಹರನಾಗುತ್ತ ದಿನರಾತ್ರಿ ಉದಯಾಸ್ತಮಾನವೆಂಬ ಸಂದುಸಂಶಯಮಂ ನೆರೆ ನೀಗುತ್ತ, ಸಪ್ತಕೋಟಿ ಮಹಾಮಂತ್ರಂಗಳಂ ಮೀರಿ ತೋರುತ್ತ. ಸದುಹೃದಯಕ್ಕೆ ಬೀರುತ್ತ, ಆತ್ಮತ್ರಯಂ ನೆರೆ ನೀಗುತ್ತ, ಘನಲಿಂಗತ್ರಯಮಂತ್ರಮಂ ಇಚ್ಛಿಸುತ್ತ, ತನ್ನ ತಾನೇ ಮಹಾಬೆಳಗ ಬೀರುತ್ತಿಪ್ಪುದೆ ಶರಣಗಣಾರಾಧ್ಯರ ಪರಿಪೂರ್ಣನಿರವಯ ಅಗಣಿತ ಅಪ್ರಮಾಣ ಅಗೋಚರ ಅಸಾಧ್ಯ ಅಭೇದ್ಯವಾದ ನಿಜಾನಂದ ನಿರವಯವಾದ ಜಪವೆನಿಸುವುದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.