Index   ವಚನ - 92    Search  
 
ಪರಿಪೂರ್ಣಾನಂದ ಜ್ಯೋತಿರ್ಮಯ ಬ್ರಹ್ಮಸ್ವರೂಪನಾದ ಪರಶಿವಯೋಗೀಶ್ವರ ನಿವೃತ್ತಿಮಾರ್ಗವನರಿದಾಚರಿಸುತಿರ್ಪುದೆಂತೆಂದೊಡೆ: ಸದ್ಭಕ್ತನಡಿಯಿಟ್ಟು, ನಿಜದೃಷ್ಟಿಯಿಂ ನೋಡಿ, ಸುಚಿತ್ತಹಸ್ತದಿಂದ ಮುಟ್ಟಿ ಸ್ಪರಿಶನಂಗೈದಲ್ಲಿ, ಪೃಥ್ವಿಯಳಿದು ನಿವೃತ್ತಿಯಾಗಿ ಚಿತ್ಪೃಥ್ವಿಯೆನಿಸಿರ್ಪುದು. ಸದ್ವೀರಮಹೇಶ್ವರನಡಿಯಿಟ್ಟು, ನಿಜದೃಷ್ಟಿಯಿಂ ನೋಡಿ, ಸುಬುದ್ಧಿಹಸ್ತದಿಂದ ಮುಟ್ಟಿ ಸ್ಪರಿಶನಂಗೈದಲ್ಲಿ, ಅಪ್ಪುವಳಿದು ನಿವೃತ್ತಿಯಾಗಿ ಚಿದಪ್ಪುವೆನಿಸಿರ್ಪುದು. ಪರಿಪೂರ್ಣಪ್ರಸಾದಿಯಡಿಯಿಟ್ಟು, ನಿಜದೃಷ್ಟಿಯಿಂ ನೋಡಿ, ನಿರಹಂಕಾರಹಸ್ತದಿಂದ ಮುಟ್ಟಿ ಸ್ಪರಿಶನಂಗೈದಲ್ಲಿ, ಅಗ್ನಿಯಳಿದು ನಿವೃತ್ತಿಯಾಗಿ ಚಿದಗ್ನಿಯೆನಿಸಿರ್ಪುದು. ಪರಮಾನಂದಪ್ರಾಣಲಿಂಗಿಯಡಿಯಿಟ್ಟು, ನಿಜದೃಷ್ಟಿಯಿಂ ನೋಡಿ, ಸುಮನಹಸ್ತದಿಂ ಮುಟ್ಟಿ ಸ್ಪರಿಶನಂಗೈದಲ್ಲಿ, ವಾಯುವಳಿದು ನಿವೃತ್ತಿಯಾಗಿ, ಚಿದ್ವಾಯುವೆನಿಸಿರ್ಪುದು. ಸಚ್ಚಿದಾನಂದ ಶರಣನಡಿಯಿಟ್ಟು ನಿಜದೃಷ್ಟಿಯಿಂ ನೋಡಿ, ಸುಜ್ಞಾನಹಸ್ತದಿಂದ ಮುಟ್ಟಿ ಸ್ಪರಿಶನಂಗೈದಲ್ಲಿ, ಆಕಾಶವಳಿದು ನಿವೃತ್ತಿಯಾಗಿ ಚಿದಾಕಾಶವೆನಿಸಿರ್ಪುದು. ನಿರಾಂತಕ ನಿಜೈಕ್ಯನಡಿಯಿಟ್ಟು, ನಿಜದೃಷ್ಟಿಯಿಂ ನೋಡಿ, ಸದ್ಭಾವಹಸ್ತದಿಂದ ನಿವೃತ್ತಿಯಾಗಿ ಚಿದಾತ್ಮನೆನಿಸಿರ್ಪುದು. ನಿರಾವಲಂಬ ನಿರವಯಮೂರ್ತಿಯಡಿಯಿಟ್ಟು, ನಿಜದೃಷ್ಟಿಯಿಂ ನೋಡಿ, ಪರಿಣಾಮಹಸ್ತದಿಂದ ಮುಟ್ಟಿ ಸ್ಪರಿಶನಂಗೈದಲ್ಲಿ, ಆ ಸೂರ್ಯಚಂದ್ರಾದಿಗಳೆಂದು ನಿವೃತ್ತಿಯಾಗಿ, ಚಿತ್ಸೂರ್ಯಚಂದ್ರರಾಗಿರ್ಪರು. ಈ ವರ್ಮಾದಿವರ್ಮವನರಿದ ಶಿವಯೋಗೀಶ್ವರರು, ತಮ್ಮಲ್ಲಿ ಸಂಬಂಧವಾದ ಅಷ್ಟತನುಮೂರ್ತಿಗಳ ನಿಮಿಷನಿಮಿಷಕ್ಕೆ ಪವಿತ್ರರೆನಿಸಿರ್ಪುದು. ಆ ಮರ್ಮಯೆಂತೆಂದೊಡೆ: ಪೃಥ್ವಿತತ್ವಸಂಬಂಧವಾದ ಕರ್ಮೇಂದ್ರಿಯಂಗಳೆಲ್ಲ ಸತ್ಕ್ರಿಯಾಚಾರವೆಂಬ ಸದ್ಭಕ್ತನ ಕಿರಣದಿಂದ ಪವಿತ್ರವೆನಿಸುವುದು. ಅಪ್ಪುತತ್ವಸಂಬಂಧವಾದ ಜ್ಞಾನೇಂದ್ರಿಗಳೆಲ್ಲ ಸಮ್ಯಜ್ಞಾನಾಚಾರವೆಂಬ ಸದ್ವೀರಮಹೇಶ್ವರನ ಕಿರಣದಿಂದ ಪವಿತ್ರವೆನಿಸುವುದು. ಅಗ್ನಿತತ್ವಸಂಬಂಧವಾದ ಬುದ್ಧೇಂದ್ರಿಗಳೆಲ್ಲ ಸದ್ಭಾವಾಚಾರವೆಂಬ ಪರಮಪ್ರಸಾದಿಯ ಕಿರಣದಿಂದ ಪವಿತ್ರವೆನಿಸುವುದು. ವಾಯುತತ್ವಸಂಬಂಧವಾದ ಪ್ರಾಣಾದಿ ವಾಯುಗಳೆಲ್ಲ ಸತ್ಯನಿತ್ಯವಾದ ಸರ್ವಾಚಾರಸಂಪದವೆಂಬ ಪರಮಾನಂದ ಪ್ರಾಣಲಿಂಗಿಯ ಕಿರಣದಿಂದ ಪವಿತ್ರವೆನಿಸುವುದು. ಆಕಾಶತತ್ವಸಂಬಂಧವಾದ ಕರಣಾದಿಗಳೆಲ್ಲ ಸತ್ಯಶುದ್ಧ ನಡೆನುಡಿ ದೃಢನೈಷ್ಠಯೆಂಬ ಸಚ್ಚಿದಾನಂದಶರಣನ ಕಿರಣದಿಂದ ಪವಿತ್ರವೆನಿಸುವುದು. ಆತ್ಮತತ್ವಸಂಬಂಧವಾದ ಅವಸ್ಥಾದಿಗಳೆಲ್ಲ ನಿಜವಿರಕ್ತಿ ಭಕ್ತಿಸಂಧಾನವೆಂಬ ಚಿದಾದಿ ಐಕ್ಯನ ಕಿರಣದಿಂದ ಪವಿತ್ರವೆನಿಸುವುದು. ಸೂರ್ಯಚಂದ್ರಾದಿಗಳೆಲ್ಲ ಕಲಾತತ್ವಸಂಬಂಧವಾದ ರಾಗರಚನೆ ಭೋಗತ್ಯಾಗಯೋಗಾದಿಗಳೆಲ್ಲ ತನ್ನ ತಾನಾದ ಮಹಾಬೆಳಗೆಂಬ ಪರಾತ್ಪರತತ್ವಮೂರ್ತಿ ನಿರವಯನ ಕಿರಣದಿಂದ ಪವಿತ್ರವೆನಿಸುವುದು. ಪ್ರಮಥಗಣಾರಾಧ್ಯರ ಘನಮಹದರುವಿನೆಚ್ಚರ ಕಾಣಿರಣ್ಣಗಳಿರಾ. ಈ ವರ್ಮವರಿಯದೆ, ಭಕ್ತ ವಿರಕ್ತ ನಿಜಮುಕ್ತನಾಗಬಾರದು. ನಿಜಮುಕ್ತನಾದಲ್ಲದೆ, ಬಯಲಬ್ರಹ್ಮದ ಬೆಳಗು ಕಣ್ದೆರವಾಗದು. ಬಯಲಬ್ರಹ್ಮದ ಬೆಳಗು ಕಣ್ದೆರವಾದಲ್ಲದೆ, ತನುಮನ ಇಂದ್ರಿಯವೆಂಬ ಮಾಯಾಪಾಶ ಹೆರೆಹಿಂಗದು, ಮಾಯಾಪಾಶ ಹೆರೆಹಿಂಗಿದಲ್ಲದೆ ತಾನೆ ತಾನಾದ ಘನಮಹಾಮಂತ್ರಮೂರ್ತಿಯಾಗಿ ನಿರಂಜನ ವಸ್ತುವಿನಲ್ಲಿ ಕೂಡಲಾರಳವಲ್ಲ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.