Index   ವಚನ - 95    Search  
 
ಪಿಂಡಬ್ರಹ್ಮಾಂಡಾದಿ ಮಾಯಾಭೋಗಯೋಗಮಂ ನೆರೆ ನೀಗಿ, ಅನಾದಿಮೂಲಚಿತ್ತಿನ ಚಿದಂಶ ಪ್ರಮಥಗಣದಾಸೋಹಸಮ್ಮೋಹಿತರಾದ, ಭಕ್ತಿ ಮುಕ್ತಿ ವಿರಕ್ತಿಯೆಂಬ ಬಾಲಬ್ರಹ್ಮದ ಕುರುಹನರಿದು ಪರಿಭವಸುಖಕ್ಕೀಡಾದ, ಕುಂಡಲತ್ರಯ ಪರಿಪೂರ್ಣಾನಂದಭವನ ಸುಖಸಮರಸೈಕ್ಯಾನಂದನಿಜಕ್ಕೀಡಾದ, ಚಿತ್ಕುಂಡಲತ್ರಯವರಿದು ಸುಸಂಗದೊಳು ಕೂಡಿ, ದುಸ್ಸಂಗವನೀಡಾಡಿ, ಪರಿಪೂರ್ಣ ಗಜಮಾರ್ಗವಿಡಿದು, ಭವಗುರಿಮಾರ್ಗವ ಹೊದ್ದದೆ, ಸತ್ಯಶುದ್ಧ ನಡೆನುಡಿ ದೃಢನೈಷ್ಠೆ ಮೂಲಚಿತ್ತುವೆ ಘನಕ್ಕೆ ಮಹಾಘನವೆಂದರಿದ ಭಕ್ತಗಣಾರಾಧ್ಯರ ಪೂರ್ಣಾನುಭಾವಜ್ಞಾನದಿಂದ, ಒಪ್ಪತ್ತು ಸತ್ಕಾಯಕದ್ರವ್ಯವ ತೆರಹಿಲ್ಲದೆ ಕೂಡಿ ಸಂಗಸಮರಸೈಕ್ಯನಾದ ಜಂಗಮ ಪ್ರಾಣಲಿಂಗಾಂಗ ಮಂತ್ರಾನುಭಾವದಿಂದ ವಿರಾಜಿಸುತ್ತ, ಗುರುವರಪ್ರಸಾದಿಯಾದ ಅಚ್ಚಪ್ರಸಾದಲಿಂಗೈಕ್ಯಂಗೆ ಕಿಂಕುರ್ವಾಣವಾಗಿ, ಅವರ ನಿಜಶೇಷಪ್ರಸಾದ ಪಾದೋದಕಮಂ ಬೆಸಗೊಂಡು, ಸಂತೃಪ್ತಾನಂದಮಯನಾಗಿ, ಮತ್ತೊಪ್ಪತ್ತು ಆ ಸತ್ಕ್ರಿಯಾ ಘನಗುರುಲಿಂಗಜಂಗಮವ ಶರಣಸತಿ ಲಿಂಗಪತಿಯೆಂಬುಭಯಸ್ಥಲದೊಳಗರಿದು, ಪರಿಣಾಮಿಸುವ ಪರಿಯೆಂತೆಂದೊಡೆ: ದೀಕ್ಷಾಪಾದೋದಕದೊಳಗೆ ಶಿಕ್ಷಾಪಾದೋದಕ ಪ್ರಣಮಸಂಬಂಧವಾದ ಶ್ರೀಭಸ್ಮೋದಕಮಂ ಮಾಡಿ ಚಿತ್ಪ್ರಸಾದ ಅನಾದಿಮೂಲಪ್ರಣಮ ಪರಿಪೂರ್ಣ ಚಿತ್ಪ್ರಸನ್ನಪ್ರಸಾದ ಅಖಂಡಜ್ಯೋತಿ ಅಖಂಡ ಮಹಾಜ್ಯೋತಿಪ್ರಣಮವೆಂಬ ತ್ರಿವಿಧಪ್ರಣಮವಂ ಶ್ರೀಗುರುಮುಖದಿಂದರಿದು, ನೂರೆಂಟು ಪ್ರಸಾದಪಾದೋದಕಪ್ರಣಮಜಪ, ನೂರೆಂಟು ಪಾದೋದಕಪ್ರಸಾದಪ್ರಣಮಜಪ ಕರತಳಾಮಳಕವಾಗಿ, ನೂರೆಂಟು ಚಿದಂಗ ಚಿದ್ಘನಲಿಂಗಸ್ಥಾನದ ಸ್ಥಾನಪ್ರದಕ್ಷಿಣಪ್ರಣಮದ ಮಹಾಬೆಳಗಿನೊಳ್ ಆಚರಣೆಯ ಪ್ರಥಮ ತಳಿಗೆ ದ್ವಿತೀಯ ಬಟ್ಟಲಾಚರಣೆಯ ಕಾರಣ ಒದಗಿರ್ದಡೆ, ಏಕತಟ್ಟೆಬಟ್ಟಲಲ್ಲಿ ಚಿದಾನಂದೋದಕ ಪರಿಪೂರ್ಣ ಪ್ರಸನ್ನಪ್ರಸಾದ ಸ್ವಯಂಭು ಮಹಾಜ್ಞಾನ ನಿರಂಜನಜಂಗಮರ ತೀರ್ಥಮಂ ಪಡೆದು ನಿಜೇಷ್ಟಬ್ರಹ್ಮದ ನವಕೃತಿಗಳಲ್ಲಿ ಬೆಳಗಿ, ಅಣುವಿಂಗಣು ಪರಮಾಣುವಿಂಗೆ, ಪರಮಾಣು, ಮಹತ್ತಿಂಗೆ ಘನಮಹತ್ತಾಗಿ ವಿರಾಜಿಸುವಂತಾಗಿ, ನಿಜವಸ್ತುವಂ ಕ್ರಿಯಾದೃಷ್ಟಿ ಜ್ಞಾನದೃಷ್ಟಿ ಮಹಾಜ್ಞಾನದೃಷ್ಟಿಗಳೆಲ್ಲ ತುಂಬಿ ತುಳುಕಾಡಿ, ಬಿಂಬಿಸುತ್ತ, ಚತುರಂಗುಲಪ್ರಮಾಣವಾಗಿ ಸಮರ್ಪಿಸುವಾಗ ಅನಾದಿಮೂಲಪ್ರಣಮಮಂ ಧ್ಯಾನಿಸುತ್ತ ಸದ್ಯೋಜಾತೋದಯ ಷಡಕ್ಷರಸ್ಮರಣೆಯಿಂದ, ಚತುರ್ವಿಧಧಾತುಲಿಂಗಾಲಯದಲ್ಲಿ ಮೂರ್ತಿಗೊಂಡಿರುವ ಆಚಾರಸನ್ಮೋಹಿ ಸತ್ಕ್ರಿಯಾಲಿಂಗವೆ ಸ್ಪರಿಶನೋದಕ ನಿಮಗೆ ಸಮರ್ಪಿತವಯ್ಯ. ವಾಮದೇವೋದಯ ಷಡಕ್ಷರಸ್ಮರಣೆಯಿಂದ, ಷಡ್ವಿಧಬಿಂದು ಲಿಂಗಾಲಯದಲ್ಲಿ ಮೂರ್ತಿಗೊಂಡಿರುವ ಮಂತ್ರಾನಂದಮೋಹಿ ಗುರುಲಿಂಗವೆ ಅವಧಾನೋದಕ ನಿಮಗೆ ಸಮರ್ಪಿತವಯ್ಯ. ಅಘೋರಾನಂದೋದಯ ಷಡಕ್ಷರಸ್ಮರಣೆಯಿಂದ ದಶವಿಧ ಕ್ಷೇತ್ರ ಲಿಂಗಾಲಯದಲ್ಲಿ ಮೂರ್ತಿಗೊಂಡಿರುವ ಸದ್ರೂಪು ಚಿದ್ರೂಪು ಚಿನ್ಮಯ ನಿರೀಕ್ಷಣಾನಂದಮಯನಾದ ಶಿವಲಿಂಗವೆ ಆಪ್ಯಾಯನೋದಕ ನಿಮಗೆ ಸಮರ್ಪಿತವಯ್ಯ. ತತ್ಪುರುಷೋದಯ ಷಡಕ್ಷರಸ್ಮರಣೆಯಿಂದ, ದ್ವಾದಶವಿಕೃತಿಲಿಂಗಾಲಯದಲ್ಲಿ ಮೂರ್ತಿಗೊಂಡಿರುವ ಯಜನಾದಿ ಪರಿಣಾಮಾನಂದಮಯನಾದ ಚರಲಿಂಗವೆ ಹಸ್ತೋದಕ ನಿಮಗೆ ಸಮರ್ಪಿತವಯ್ಯ. ಗೋಪ್ಯೋದಯ ಷಡಕ್ಷರಸ್ಮರಣೆಯಿಂದ ಉಭಯವಿದ್ಯುಲ್ಲಿಂಗಾಲಯದಲ್ಲಿ ಮೂರ್ತಿಗೊಂಡಿರುವ ವೇದಾದಿ ಪರಿಣಾಮಾನಂದಮಯನಾದ ಮಹಾಲಿಂಗವೆ ನಿರ್ನಾಮೋದಕ ನಿಮಗರ್ಪಿತವಯ್ಯ. ಅಖಂಡಗೋಪ್ಯೋದಯ ಷಡಕ್ಷರಸ್ಮರಣೆಯಿಂದ, ಸಹಸ್ರ ಶಿವಕಳಾಲಿಂಗಾಲಯದಲ್ಲಿ ಮೂರ್ತಿಗೊಂಡಿರುವ ಪರಿಪೂರ್ಣ ದೀಕ್ಷಾಪರಿಣಾಮಾನಂದಮಯನಾದ ನಿಃಕಲಾಲಿಂಗವೇ ಆನಂದೋದಕ ನಿಮಗರ್ಪಿತವಯ್ಯ. ಅಖಂಡಮಹಾಗೋಳಕೋದಯ ಷಡಕ್ಷರಸ್ಮರಣೆಯಿಂದ, ತ್ರಿವಿಧಚಿತ್ಕಳಾಲಿಂಗಾಲಯದಲ್ಲಿ ಮೂರ್ತಿಗೊಂಡಿರುವ ಪರಮಾನಂದ ಶಿಕ್ಷಾಪರಿಣಾಮಾನಂದಮಯನಾದ ನಿಃಶೂನ್ಯಲಿಂಗವೆ ಶಿಕ್ಷಾನಂದೋದಕ ನಿಮಗರ್ಪಿತವಯ್ಯ. ಅಖಂಡಮಹಾಪರಿಪೂರ್ಣಗೋಳಕೋದಯದ ಷಡಕ್ಷರಸ್ಮರಣೆಯಿಂದ, ಏಕನಿರಂಜನ ವ್ಯಂಜನಾಲಯದಲ್ಲಿ ಮೂರ್ತಿಗೊಂಡಿರುವ ಸಚ್ಚಿದಾನಂದ ಮೋಕ್ಷಪರಿಣಾಮಾನಂದಮಯನಾದ ನಿರಂಜನಲಿಂಗವೆ ಜ್ಞಾನಾನಂದೋದಕ ನಿಮಗರ್ಪಿತವಯ್ಯ ಅಖಂಡಮಹಾಪರಿಪೂರ್ಣ ನಿರವಯಗೋಳಕೋದಯ ತ್ರಿಯಕ್ಷರಸ್ಮರಣೆಯಿಂದ ಬಯಲಮಂಟಪ ಚಿದಾಲಯದಲ್ಲಿ ಮೂರ್ತಿಗೊಂಡಿರುವ ನಿರವಯಾನಂದಮಯನಾದ ಜ್ಯೋತಿರ್ಲಿಂಗವೆ ಸತ್ಯೋದಕ ನಿಮಗರ್ಪಿತವಯ್ಯ. ಎಂದು ಈ ತೆರದಿಂದ ದಶವಿಧಲಿಂಗಾಂಗಗಳಿಗೆ ದಶವಿಧಪ್ರಣಮಸ್ಮರಣೆಯಿಂದ ದಶವಿಧಪರಿಪೂರ್ಣ ಚಿತ್ಪ್ರಸಾದೋದಕವ ಸತಿಪತಿ ಒಂದೆ ಸ್ಥಲವಾದೊಡೆ ತಾ ಸಲಿಸಿದ ಮೇಲೆ ಸೂಕ್ಷ್ಮಪ್ರಣಮಧ್ಯಾನವ ಕರಿಗೊಳಿಸಿ, ಅತಿಗೋಪ್ಯದಿಂದ ಕೊಟ್ಟು, ನಿರ್ನಾಮವೆನಿಸಿ, ತಾ ಸಲಿಸಿದ ಎಡೆಯ ಕೂಡುವುದು ಆಚಾರಸ್ಥಲ: ಬೇರಾದೊಡೆ ಕೂಡಲಾಗದು. ಮತ್ಯಾರಾದೊಡು ಭಕ್ತಗಣಾರಾಧ್ಯರು ಶರಣೆಂದೊಡೆ ಕೊಂಡುಕೊಳ್ಳುವುದು ಮಾಡಲಾಗದು, ಮಾಡಿದಡೆ ಪಡಕೊಂಡು ಮಾರ್ಗಕ್ರಿಯಾ ಭಕ್ತಿಜಂಗಮಲೀಲೆಯ ಬಳಸುವುದೆ ಪ್ರಮಥಗಣಾಚಾರ ನ್ಯಾಯವು. ಇನ್ನು ಹಿಂದೆ ಹೇಳಿದ, ಮಹಾಜ್ಞಾನತೀರ್ಥವ ಸಲಿಸಿದ ಘನಲಿಂಗ ಶರಣನು ಜಂಗಮಸೂತ್ರದಿಂದ ಹಸ್ತಸ್ಪರಿಶನವ ಮಾಡಿದ ಗುರುರೂಪದ್ರವ್ಯ ಇಲ್ಲವಾದ ಸ್ಥಲವಾದೊಡೆ, ಗುರುಪಂಚಾಕ್ಷರ ಲಿಂಗಪಂಚಾಕ್ಷರವ ಅಂತರಂಗದಲ್ಲಿ ಧ್ಯಾನಿಸಿ, ವಾಮಕರಸ್ಥಲದಲ್ಲಿ ಚಿದ್ಘನಮಹಾನಿಜೇಷ್ಟಲಿಂಗದೇವನ ಮೂರ್ತಮಾಡಿಸಿಕೊಂಡು, ಮೂಲಷಡಕ್ಷರ ಪಂಚಾಕ್ಷರ ತ್ರಿಯಕ್ಷರ ಏಕಾಕ್ಷರ ಚಿದ್ಬಿಂದುವೆಂಬ ಷೋಡಶಚಿತ್ಕಳಾಪ್ರಣಮಸ್ವರೂಪವ ಮಹದರುವಿನ ಕೊನೆಮೊನೆಯಲ್ಲರಿದು, ಧ್ಯಾನಿಸುತ್ತ, ಕ್ರಿಯಾಭಸಿತಸ್ಪರಿಶನಂಗೈದು, ದಕ್ಷಿಣಹಸ್ತಮಣಿಗಳೆಲ್ಲ ವ್ಯಾಪಿಸಿ, ಆ ಹಸ್ತಕ್ಕೆ ಪಾವುಡವ ಮರೆಮಾಡಿ, ಗೋಪ್ಯಮುಖದಲ್ಲಿ ಚಿದ್ಗುರುಲಿಂಗಜಂಗಮವೆಂಬ ತ್ರಿವಿಧಪ್ರಣಮವ ಪ್ರದಕ್ಷಿಸಿ, ಶುದ್ಧಪ್ರಸಾದಪ್ರಣಮಬಿಂದು, ಸಿದ್ಧಪ್ರಸಾದಪ್ರಣಮಬಿಂದು, ಪ್ರಸಿದ್ಧಪ್ರಸಾದಪ್ರಣಮಬಿಂದುಯೆಂಬ ದ್ವಾದಶಪ್ರಣಮಪ್ರಸಾದ ಮಂತ್ರಮಣಿಗಳಂ ಮುಟ್ಟಿ, ಮನಘನಮಂತ್ರವಾಗಿ, ಮತ್ತೆಂದಿನಂತೆ ಪ್ರದಕ್ಷಿಸಿ, ಒಂದೇವೇಳೆ ತನ್ನ ಸರ್ವಾಚಾರಕ್ಕೆ ಕರ್ತೃವಾಗಿ ಪ್ರಸನ್ನವಾದ ಪವಿತ್ರಮೂರ್ತಿಯ ಚಿದಾಲಯಮಧ್ಯಮಂಟಪ ಶೂನ್ಯಸಿಂಹಾಸನದ ವರಚೌಕಮಧ್ಯ ಹೃತ್ಕಮಲವೆಂಬ ಅನಿಮಿಷಸ್ಥಾನದಲ್ಲಿ ಮಹಾಜ್ಞಾನದಿಂದ ಮೂರ್ತಗೊಳಿಸಿ, ಆತನ ಮಹಾಜ್ಞಾನಚರಣಕ್ಕೆ ಸ್ಪರಿಶನಂಗೈದು ಸುಚಿತ್ತವೆಂಬ ಕ್ರಿಯಾಕರಸ್ಥಲವ ಚಿದ್ಘನಲಿಂಗದೇವನ ಮಸ್ತಕದಲ್ಲಿಟ್ಟು, ತನ್ನೆಡೆಗೆ ಶುದ್ಧಪ್ರಸಾದ ಪಂಚಾಕ್ಷರದಿಂದೆ ನೆನಹುನಿರ್ಧಾರವಾಗಿ ಒಂದುವೇಳೆ ಸ್ಪರಿಶನಂಗೈದು ಸಿದ್ಧಪ್ರಸಾದಪಂಚಾಕ್ಷರದಿಂದ ಮತ್ತೊಮ್ಮೆ ಸ್ಪರಿಶನಂಗೈದಲ್ಲಿ, ಪ್ರಸಿದ್ಧಪ್ರಸಾದತ್ರಿಯಕ್ಷರ ಸ್ಮರಣೆಯಿಂದ ಮೂಲಮಂತ್ರಮೂರ್ತಿ ಶ್ರೀಗುರುಲಿಂಗಜಂಗಮವೆ ನಮಃ ಎಂದು ಮತ್ತೊಮ್ಮೆ ಸ್ಪರಿಶನಂಗೈದು ಪರಮಪವಿತ್ರ ಘನಗುರುಸ್ವರೂಪ ಶುದ್ಧಪ್ರಸಾದವೆನಿಸುವುದು. ಅಂತಪ್ಪ ಶುದ್ಧಪ್ರಸಾದವನು ನಾಲ್ವತ್ತೆಂಟು ಪರಮಾನಂದಪ್ರಣಮಸ್ಮರಣೆಯಿಂದ, ಆಯಾಯ ಹಸ್ತಮುಖಲಿಂಗ ದ್ರವ್ಯಪ್ರಸಾದಂಗಳೆಂಬ ನಿಜಮಿಶ್ರಾರ್ಪಣದೇಕಾದಶಪ್ರಸಾದದಿರವನರಿದು, ಚಿತ್ಕಲಾಪ್ರಸನ್ನಪ್ರಸಾದವಾಗಿ ಪರಿಶೋಭಿಸುವ ಶರಣಲಿಂಗ ತಾನೆ ತಾನಾಗಿ, ಸಂತೃಪ್ತಿಯಿಂದ ಘನಕ್ಕೆ ಘನಗಂಭೀರನೆನಿಸಿ, ಈ ಸನ್ಮಾರ್ಗವು ಗೋಪ್ಯಕ್ಕತಿಗೋಪ್ಯವಾಗಿ, ಕರುಣಿಸಿದ ಗುರುವು ತನ್ನೊಳಗಾಗಿ, ತಾನು ಗುರುವಿನೊಳಗಾಗಿ, ಏಕರೂಪವೆನಿಸಿ, ಒಡಲೊಂದಾಗಿ, ಅಭಿನ್ನನಿಜಯೋಗಾನಂದದಿಂದ ನಡೆನುಡಿ ದೃಢಚಿತ್ತ ಹೊದ್ದಲ್ಲದೆ ಜ್ಯೋತಿಜ್ಯೋತಿ ಕೂಡಿ ಬಯಲಾದಂತೆ, ಕೇವಲ ಜಂಗಮಲಿಂಗವ ಒಪ್ಪತ್ತಾಚರಣೆಯಿಂದ ಅಚ್ಚಪ್ರಸಾದಿಯಂತೆ ತತ್ಪ್ರಾಣವಾಗಿ ಮತ್ತೊಪ್ಪೊತ್ತು ಒದಗಿದೊಡೆ ಮಹಾಸಂತೋಷದಿಂದ ಪರಿಣಾಮತೃಪ್ತಿಯಿಂದ ಆಚರಣೆಯ ಅಂಗ ಮನಪ್ರಾಣವಾಗಿ ಪರಿಶೋಭಿಸಿ. ಒಪ್ಪತ್ತು ಆಚರಣೆ ಒದಗಿ, ಮತ್ತೊಪ್ಪೊತ್ತು ಆಚರಣೆ ನಿಂತು, ಚತುರ್ವಿಧಸಾರಾಯಸ್ಥಲ ಶೂನ್ಯ ಚಿದಂಗ ಚಿದ್ಘನಲಿಂಗ ಸಂಗಸಮರಸೈಕ್ಯನಾಗೊಪ್ಪುವ ಉಭಯಸ್ಥಲವಾದಲ್ಲಿ ಈ ತೆರದಿಂದ ಸಂಬಂಧಾಚರಣೆಯನಾಚರಿಸಿ, ತನ್ನ ತಾನರಿದು, ಇದಿರಿಟ್ಟ ಭೋಗವ ಮರೆದಾತನೆ ನಿಚ್ಚಪ್ರಸಾದಿಯೆಂಬೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.