Index   ವಚನ - 94    Search  
 
ನಿರುಪಮಿತವೆನಿಸಿ, ಷಡ್ವಿಧಶೀಲ ವ್ರತಾಚಾರ ನೇಮ ನಿತ್ಯ ಸತ್ಯಸದುಭಾವ ಸನ್ಮಾನಿತ ನಿಜೇಷ್ಟಲಿಂಗಸಂಬಂಧ ಸದ್ಧರ್ಮಪ್ರಸನ್ನ ತ್ರಿವಿಧಪ್ರಸಾದಿಗಳಿರವದೆಂತೆಂದೊಡೆ: ತನ್ನ ಸತ್ಕಾಯಕಮುಖದಲ್ಲಿ ಗುರುಕರುಣದಿಂದೊದಗಿದ ತನುಮನಧನ ಸುಪದಾರ್ಥಗಳ ಘನಪವಿತ್ರಂಗಳಿರವನರಿದು, ತನ್ನ ಸರ್ವೇಂದಿಮುಖದಲ್ಲಿ ಪರಿಣಾಮಿಸಬೇಕೆಂದಿಚ್ಛೆದೋರಿದೊಡೆ, ಅದರೊಳಗೆ ಕ್ರಿಯಾಮುಖ ಜ್ಞಾನಮುಖ ಮಹಾಜ್ಞಾನ ಮುಖವನರಿದು ಕ್ರಿಯಾರ್ಪಣಪದಾರ್ಥವ ಕ್ರಿಯಾಜಂಗಮ ಲಿಂಗದೇವಂಗೆ ಸಮರ್ಪಿಸಿ, ಅವರೊಕ್ಕುದ ಮಿಕ್ಕುದ ಬೆಸಗೊಂಡು ಇಷ್ಟಲಿಂಗಾರೋಪಿತಮುಖದಲ್ಲಿ ಪ್ರಾಣಲಿಂಗ ಭಾವಲಿಂಗಾರ್ಪಣವೆನಿಸಿ, ಆ ಕ್ರಿಯಾಲಿಂಗಜಂಗಮಪ್ರಸಾದವೆ ಎನ್ನ ಕಾಯವೆಂದರಿದು, ತನು ಮೀಸಲಾಗಿ, ಸತ್ಕ್ರಿಯಾ ಸಾಧನೆಯಳವಟ್ಟು, ಜೀವಾತ್ಮನ ಸಂಚಲನಡಿಮೆಟ್ಟಿ, ನಿಂದ ನಿಲವೆ ತನುಶುದ್ಧಪ್ರಸಾದದಿರವು. ಜ್ಞಾನಾರ್ಪಣಪದಾರ್ಥವ, ಜ್ಞಾನಜಂಗಮಲಿಂಗದೇವಂಗೆ ಸಮರ್ಪಿಸಿ, ಅವರೊಕ್ಕುಮಿಕ್ಕ ಸಂತೋಷದಿಂದ ಮಹಾಜ್ಞಾನ ಘನಲಿಂಗಮಂತ್ರಮಯವೆನಿಸಿ, ಅನಿಮಿಷ ರೂಪು ರುಚಿ ತೃಪ್ತಿಯಾದ ಮಹಾಶೇಷನ ಬೆಸಗೊಂಡು ಇಷ್ಟಲಿಂಗ ಸೊಮ್ಮುಸಂಬಂಧದಿಂದ ಪ್ರಾಣಲಿಂಗಾರೋಪಿತಮುಖದಲ್ಲಿ ಇಷ್ಟಲಿಂಗದಲ್ಲಿ ಸಮರಸೈಕ್ಯನಾದ ಚಿತ್ಪ್ರಣಮ ಪ್ರಾಣಲಿಂಗ ಭಾವಲಿಂಗಾರ್ಪಣವೆನಿಸಿ, ಆ ಸುಜ್ಞಾನಲಿಂಗಜಂಗಮಪ್ರಸಾದವೆ ಎನ್ನ ಮನವೆಂದರಿದು, ಮನದ ನುಡಿ ಮೀಸಲಾಗಿ, ಸಮ್ಯಜ್ಞಾನಾಚಾರ ಸಾಧನೆ ಅಳವಟ್ಟು ಅಂತರಾತ್ಮನ ಸಂಚಲವನಡಿಮೆಟ್ಟಿ ನಿಂದ ನಿಲವೆ ಮನ ಸಿದ್ಧಪ್ರಸಾದದಿರವು. ಮಹಾಜ್ಞಾನಾರ್ಪಣಪದಾರ್ಥವ ಮಹಾಜ್ಞಾನಜಂಗಮಲಿಂಗದೇವಂಗೆ ಸಮರ್ಪಿಸಿ ಅವರೊಕ್ಕುಮಿಕ್ಕು ಸಂತೋಷದಿಂದ ಮಹಾಪ್ರಕಾಶಪ್ರಸಾದವೆಂದು ಪರಿಪೂರ್ಣವೆನಿಸಿ, ಅನಿಮಿಷಮಹಾವಲೋಕನ ರೂಪು ರುಚಿ ತೃಪ್ತಿಯಾದ ಮಹಾಘನಚಿತ್ಕಲಾಶೇಷವ ಬೆಸಗೊಂಡು, ನಿಜೇಷ್ಟಲಿಂಗ ಸೊಮ್ಮುಸಂಬಂಧದಿಂದೆ ಪ್ರಾಣಲಿಂಗಾರೋಪಿತಮುಖದಲ್ಲಿ ಇಷ್ಟಲಿಂಗದ ಚಿದ್ಹೃದಯದಲ್ಲಿ ಗೋಪ್ಯಮುಖದೊಳ್ ನೆಲೆಗೊಂಡಿರುವಂಥ ಚಿತ್ಪ್ರಭಾಪ್ರಾಣಲಿಂಗ ಭಾವಲಿಂಗಾರ್ಪಣವೆನಿಸಿ, ಆ ಮಹಾಜ್ಞಾನ ಲಿಂಗಜಂಗಮ ಪ್ರಸಾದವೆ ಎನ್ನ ಪ್ರಾಣವೆಂದರಿದು, ಪ್ರಾಣ ದೃಢ ನೈಷ್ಠೆ ನೆನಹು ನಿರ್ಧರ ಮೀಸಲಾಗಿ, ಪರಿಪೂರ್ಣ ಮಹಾಜ್ಞಾನಾನುಭಾವಾಚಾರಸಾಧನೆಯಳವಟ್ಟು, ಪರಮಾತ್ಮನ ಸಂಚಲವನಡಿಮೆಟ್ಟಿ ನಿಂದ ನಿಲವೆ ಪ್ರಾಣಪ್ರಸಿದ್ಧ ಪ್ರಸಾದದಿರವುಯೆಂದು ಪೂರ್ವಪುರಾತನೋಕ್ತಿಯುಂಟು.ಈ ಇರವನರಿಯದೆ, ದಶವಿಧಪಾದೋದಕ ಏಕಾದಶಪ್ರಸಾದ ಪ್ರಣಮವ ಕಾಣಬಾರದು ಈ ನಿರ್ಣಯವನರಿದು, ಹಿಂದೆ ಹೇಳಿದ ಅರ್ಪಿತಾವಧಾನವ ಕಂಡುಂಡುಟ್ಟು, ನಿತ್ಯತೃಪ್ತರಾದವರೆ ಕೇವಲ ನಿಜಜಂಗಮಪ್ರಾಣಿಯಾದ ಅಚ್ಚಪ್ರಸಾದಿ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.