Index   ವಚನ - 99    Search  
 
ಪರಿಪೂರ್ಣಾಂಗ ಲಿಂಗ ಶಕ್ತಿ ಭಕ್ತಿ ಹಸ್ತ ಮುಖ ಪದಾರ್ಥ ಪ್ರಸಾದವೆಂಬ ಅಷ್ಟವಿಧಸಕೀಲವೆ ಮೊದಲು, ಇನ್ನೂರಹದಿನಾರು ಸಕೀಲವೆ ಕಡೆಯಾದ ಸಮಸ್ತ ಸಕೀಲದ ವರ್ಮಾದಿವರ್ಮವರಿದು, ಸಚ್ಚಿದಾನಂದಸಾಗರವೆಂಬ ಗುರುಪಾದೋದಕಪ್ರಸಾದಿ, ಲಿಂಗಪಾದೋದಕಪ್ರಸಾದಿ, ಜಂಗಮಪಾದೋದಕಪ್ರಸಾದಿ, ಪರಿಪೂರ್ಣಪಾದೋದಕ ಪ್ರಸಾದಿ, ಚಿತ್ಕಲಾಪಾದೋದಕಪ್ರಸಾದಿಯೆಂಬ ಸ್ಥಲದ ವರ್ಮವರಿದು, ಬೆರಸಿ, ವಿನೋದಾರ್ಥದಿಂದ ಉಪಾಧಿಯಿಲ್ಲದೆ ನಿರುಪಾಧಿಶಿವಾರಣ್ಯಕ್ಕೆ ವಿರೋಧಿಸಿ, ಪರಿಣಾಮಿಸಬೇಕೆಂಬ ನಿಜಶಿವಯೋಗೀಶ್ವರರು, ಪಂಚಕಸಂಯುಕ್ತವಾದ ಫಲಂಗಳ ಕಂಡು, ಭಿಕ್ಷಾಂದೇಹಿಯಾಗಿ ತೆಗೆದುಕೊಂಡು, ಪರಿಣಾಮಜಲವಿದ್ದಲ್ಲಿಗೆ ಹೋಗಿ, ಅನಾದಿ ಶ್ರೀಗುರುಲಿಂಗಜಂಗಮಸ್ವರೂಪಧ್ಯಾನದಿಂದ, ಆ ಉದಕದ ಪೂರ್ವಾಶ್ರಯವ ಕಳೆದು, ಪರಮಾನಂದಜಲವೆಂದು, ನಿತ್ಯನಿತ್ಯವಾಚರಿಸುವು ಕರ್ಮೇಂದ್ರಿಗಳನ್ನು ಶುಚಿರ್ಭೂತವೆನಿಸಿ, ಕಟಿಸ್ಥಾನ ಕಂಠಸ್ಥಾನ ಮಂಡೆಸ್ಥಾನಗಳ ಪರಿಣಾಮಪರಿಯಂತರವಾಚರಿಸಿ, ನಾರಿಕೇಳ ಕೂಷ್ಮಾಂಡ ಬಿಲ್ವಾದಿ ಮೃದ್ಭಾಂಡ ಕಡೆಯಾದ ಕರಂಡ ಕಪಾಲಗಳಲ್ಲಿ ತೀರ್ಥೋದಕ ಶೇಷೋದಕ ಚಿದಾನಂದೋದಕಗಳ ಪರಿಣಾಮಿಸಿ, ರಸಫಲಗಳಲ್ಲಿರುವ ಕಠಿಣ ಕಸವ ಕಳೆದುಳಿದು, ಪಕ್ವಮಾಡಿಟ್ಟು, ರಂಭಾದಿ ವಟಫಲ ಕಡೆಯಾದ ಪಲಾಶವಂತವಾದ ಪರ್ಣಾದಿಗಳಲ್ಲಿ ಅರ್ಪಿತವಾದನ್ನದ್ರವ್ಯ ಉದಕಂಗಳು ಸೂಸಲೀಯದಂತೆ ರಚಿಸಿ, ಸಂಬಂಧಾಚರಣೆಯ ಮಹಾಜ್ಞಾನಸೂತ್ರದಲ್ಲಿ ತನ್ನ ತಾನೆ ಪ್ರತಿ ಯಾರೂ ಇಲ್ಲದೆ ಸಾವಧಾನದಿಂದ ಕ್ರಿಮಿಕೀಟಾದಿಗಳಿಗೆ ಶೇಷಪ್ರಸಾದೋದಕ ಓರ್ವರಾಚರಿಸಿ ಲಿಂಗವೆ ಜಂಗಮವೆಂಬ ಸಚ್ಚಿದಾನಂದನ್ಯಾಯದಿಂದ ಪರಿಣಾಮಿಸುವುದೆ ಏಕಭಾಜನಭೋಜನಸ್ಥಲವು. ಇದೆ ಸಮಯಪ್ರಸಾದಿಯ ನ್ಯಾಯವು. ಇಂತಪ್ಪ ಶೇಷಪ್ರಸಾದ ಪಾದೋದಕ ಸೇವಿಸಿದ ಪರ್ಣಂಗಳ ಭೂನಿಕ್ಷೇಪವ ಮಾಡಿ, ಸುಯಿಧಾನಿಯಾಗಿರ್ಪುದೆ ಸತ್ಯಶರಣರ ಮಾರ್ಗವು. ಈ ಮಾರ್ಗವು ಉಭಯಗಣಾಧೀಶ್ವರರು ಆಚರಣೆಯನಾಚರಿಸಿ, ಅಚ್ಚಪ್ರಸಾದಸ್ಥಲದಿಂದ ಪಡಕೊಂಡು ಮುಗಿಯಬೇಕೆಂದಡು ಬಂದೀತು. ಇದು ಬಹುಸಾವಧಾನಿಗಳಾಚರಿಸುವ ನ್ಯಾಯವು, ಇದಕೇನು ಸಂಶಯವಿಲ್ಲವು; ಪೂರ್ವಪುರಾತನೋಕ್ತವುಂಟು. ಪಾದಾರ್ಚನೆಮಾಡಿ ಪಡಕೊಂಡಾತನು ಪಾದವ ಪಾಲಿಸಿದಾತನು, ಏಕಭಾಜನಭೋಜನವುಂಟು. ಬಹುಗೋಪ್ಯದಲ್ಲಿ ಆಚರಿಸುವದು, ಇದು ಸಮರಸಜ್ಞಾನಿಗಳ ಮಾತು. ಭೌಕ್ತಿಕ ಅನ್ನುದಕಾದಿಗಳ ಗುರುವಿತ್ತ ಲಿಂಗಕ್ಕೆ ನೈವೇದ್ಯವ ಮಾಡಿ, ಲಿಂಗದ ಸೆಜ್ಜೆಯ ಧರಿಸಿ ಭೋಜೆಗಟ್ಟಿ ಭುಂಜಿಸುವರೆಲ್ಲ ಭಿನ್ನ ಭಾಜನಭೋಜನರೆನಿಸುವರು. ಇವರಿಗೆ ಸಹಸ್ರಜನ್ಮಕ್ಕೆ ಜ್ಞಾನೋದಯವಾಗುವದು ಹಸ್ತಪ್ರಸಾದವಾದ ಶುದ್ಧದ್ರವ್ಯಗಳ ಭಕ್ತಗಣಾರಾಧ್ಯ ಶಿವಶರಣ ಜಂಗಮಕ್ಕೆ ಪ್ರೀತಿಪ್ರೇಮದಿಂದ ದಾಸೋಹಂಭಾವದೊಳ್ ಸಾವಧಾನದಿಂದ ತನ್ನ ಕರಸ್ಥಲದಿಷ್ಟಲಿಂಗಮೂರ್ತಿಯ ಅವರ ಕಂಗಳಾಗ್ರದಲ್ಲರಿದು ಲಿಂಗವ ಕೂಡುವಾತ ಲಿಂಗವ ಕೊಂಬುವಾತನೆಂಬ ನಿಜನೈಷ್ಠೆಪರನಾಗಿ, ಸರ್ವಾಂಗಲಿಂಗಸಂಬಂಧದೊಳ್ ಪರಿಪೂರ್ಣ ಭೋಜೆಗಟ್ಟಿ ನೀಡಿ ಮಾಡಿ ಸಂತೋಷವೆಂಬ ಪರಮಾನಂದ ಶೇಷೋದಕದಲ್ಲಿ ಸಂತೃಪ್ತರಾಗಿರ್ಪುದೆ ಪ್ರಸಾದಭೋಜನವೆನಿಸುವದು. ಅಲ್ಲಿಂದ ಆ ಭಕ್ತಗಣಾರಾಧ್ಯ ಶಿವಶರಣಜಂಗಮೂರ್ತಿಗಳೊಕ್ಕುಮಿಕ್ಕ ಶೇಷೋದಕಂ ಕರ ಮನ ಭಾವದ ಕೊನೆಮೊನೆಯೊಳಗಿಪ್ಪ ಚಿಜ್ಜ್ಯೋತಿಪ್ರಣಮಲಿಂಗಂಗಳೊಡನೊಡನೆ ಸದ್ರೂಪು ಚಿದ್ರೂಪು ಆನಂದರೂಪು ರುಚಿತೃಪ್ತಿಗಳ ಪರಿಣಾಮಿಸುವುದೆ ಸಹಭೋಜನವೆನಿಸಿರ್ಪುದು. ಈ ತ್ರಿವಿಧವರಿದು ಮರೆಯದಿರ್ದು ತನ್ನ ತಾನರಿದು ಘನಗಂಭೀರರಿಗೆ ಎತ್ತಿದ ಲೀಲೆ ಪರಿಣಾಮ ಪರಿಪೂರ್ಣಜ್ಞಾನದ ಬೆಳಗುದೋರಿ ಬಯಲೊಳಗೆ ಮಹಾಬಯಲಪ್ಪುದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.