Index   ವಚನ - 100    Search  
 
ಅಯ್ಯಾ, ನಾನು-ನೀನು, ಆದಿ-ಅನಾದಿ, ತಂದೆ-ತಾಯಿ, ಹೆಣ್ಣು-ಗಂಡು, ಪುಣ್ಯ-ಪಾಪ, ಸುಖ-ದುಃಖ, ಇಹ-ಪರ, ಗುರು-ಶಿಷ್ಯ ಅಂಗ-ಲಿಂಗ, ಜಾಗ್ರ-ಸ್ವಪ್ನ, ಪೂಜ್ಯ-ಪೂಜಕ, ಜೀವ-ಅಜೀವ, ಕಾಯ-ಪ್ರಾಣ, ಪೃಥ್ವಿ-ಅಪ್-ತೇಜೋವಾಯು-ಆಕಾಶ, ಸೂರ್ಯ-ಚಂದ್ರ ಆತ್ಮರಿಲ್ಲದಂದು ಅತ್ತತ್ತಲಾದ ಪರಶಿವಲಿಂಗ ಶರಣಸಂಬಂಧವನರಿದು, ಭೋಗಯೋಗಾದಿಗಳನಳಿದು ದೇಹಾದಿ ಕರಣೇಂದ್ರಿಗಳ ಪ್ರಪಂಚನಳಿದು, ನಡೆನುಡಿಭಿನ್ನವಾಗದೆ ಕೇವಲ ಲಿಂಗವೆ ಶರಣನಲ್ಲಿ ಬೆರೆದು, ಶರಣನೆ ಲಿಂಗದಲ್ಲಿ ಬೆರೆದು ಭಿನ್ನದೋರದೆ, ಕ್ಷೀರ-ಕ್ಷೀರ, ತೈಲ-ತೈಲ, ಘೃತ-ಘೃತ, ನೀರು-ನೀರು, ಜ್ಯೋತಿ-ಜ್ಯೋತಿ ಪರಿಮಳ-ಪರಿಮಳ, ವರ್ಣ-ವರ್ಣ ಒಂದಾಗಿ ಸಮರಸವನೈದಿದಂತೆ, ತತ್ವಾತೀತನಾಗಿ ತತ್ತ್ವಮಸಿಯೆಂಬ ಪದತ್ರಯಮಂ ಮೀರಿ, ಜ್ಞಾತೃ-ಜ್ಞಾನ-ಜ್ಞೇಯವೆಂಬ ಜ್ಞಾನತ್ರಯಮಂ ಹಿಂಗಿ, ಪರಾತ್ಪರದ ಬೆಳಗಿನೊಳಗಣ ಮಹಾಬೆಳಗಾಗಿ ತನಗೊಂದು ತೊಡಕಿಲ್ಲದೆ ಸರ್ವಾಚಾರ ಸಚ್ಚಿದಾನಂದ ಸುಧಾಮೃತವ ಒಡನೊಡನೆ ಸವಿದುಂಡು ಕ್ರಿಯಾನಿಷ್ಪತ್ತಿ, ಜ್ಞಾನನಿಷ್ಪತ್ತಿ, ಭಾವನಿಷ್ಪತ್ತಿಯಂ ಸಾಧಿಸಿ, ಭೇದಿಸಿ, ತಾನು ತಾನಾದಾತನೆ ನಿರವಯವಸ್ತುವ ಕೂಡಿದ ಘನಲಿಂಗಸಂಗಿಗಳೆಂಬೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.