Index   ವಚನ - 101    Search  
 
ಅಯ್ಯಾ, ತಾನು ತಾನಾದ ಪೂರ್ವಪುರಾತನರ ವಚನಸಾರಾಮೃತಮಂ ಕರತಳಾಮಳಕವಾಗಿ, ಜ್ಞಾನೋದಯವಾಗಿ, ಅಡಿಗೆರಗಿ ಬಂದ ಜ್ಞಾನಕಲಾತ್ಮರಿಗೆ ಉಪದೇಶಿಸಿದಲ್ಲಿ, ಆ ಜ್ಞಾನಕಲಾತ್ಮರು ನಿಜಾನುಭಾವದಿಂದೆ ಈ ವಚನಸಾರಾಮೃತವನನುಭವಿಸಿ, ಸುಖಿಸಿ ಶಿವಯೋಗೀಶ್ವರರಿಗೆ ಪ್ರಸನ್ನತ್ವದ ಬೆಳಗುದೋರಿ, ಯೋಗಾಂಗವೆಲ್ಲ ನಿರಂಜನಲಿಂಗಜಂಗಮದಲ್ಲಿ ಬಯಲಪ್ಪುದು. ಭೋಗಾಂಗವೆಲ್ಲ ಶೂನ್ಯಲಿಂಗಜಂಗಮದಲ್ಲಿ ಬಯಲಪ್ಪುದು. ತ್ಯಾಗಾಂಗವೆಲ್ಲ ನಿಃಕಲಲಿಂಗಜಂಗಮದಲ್ಲಿ ಬಯಲಪ್ಪುದು. ಮಹದಂಗವೆಲ್ಲ ಮಹಾಲಿಂಗಜಂಗಮದಲ್ಲಿ ಬಯಲಪ್ಪುದು. ಶೇಷಾಂಗವೆಲ್ಲ ಪರಿಪೂರ್ಣನಿಜಶೇಷಾನಂದ ಲಿಂಗಜಂಗಮದಲ್ಲಿ ಬಯಲಪ್ಪುದು. ಚರಾಂಗವೆಲ್ಲ ನಿತ್ಯತೃಪ್ತಾನಂದ ಚರಲಿಂಗಜಂಗಮದಲ್ಲಿ ಬಯಲಪ್ಪುದು. ಶಿವಾಂಗವೆಲ್ಲ ಸದ್ರೂಪು ಚಿದ್ರೂಪು ಚಿನ್ಮಯರೂಪು ಶಿವಲಿಂಗಜಂಗಮದಲ್ಲಿ ಬಯಲಪ್ಪುದು. ಗೌರವಾಂಗವೆಲ್ಲ ಚಿದ್ಘನಜ್ಯೋತಿರೂಪ ಗುರುಲಿಂಗಜಂಗಮದಲ್ಲಿ ಬಯಲಪ್ಪುದು. ಆಚಾರಾಂಗವೆಲ್ಲ ಪರಿಪೂರ್ಣಾನಂದ ಕ್ರಿಯಾಲಿಂಗಜಂಗಮದಲ್ಲಿ ಬಯಲಪ್ಪುವುದು ತಪ್ಪುದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.