ನೀವು ನಿಮ್ಮ ಸ್ವಲೀಲೆಯಿಂದೆ
ಜಗದ ಲೀಲಾ ವೈಭವಂಗಳ ನಟಿಸಬೇಕೆಂದು
ನಿಮ್ಮಲ್ಲಿ ನೆನಹುದೋರಲು,
ಆ ನೆನಹು ನಿರ್ಧರಿಸಿ, ಚಿತ್ತೆನಿಸಿತ್ತು.
ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು.
ಆ ಚಿನ್ನಾದ ಚಿದ್ಬಿಂದು ಚಿತ್ಕಳೆ
ಆ ಮೂಲಚಿತ್ತು ಸಹವಾಗಿ ಗಟ್ಟಿಗೊಂಡು
ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು.
ಆ ಮಹಾಲಿಂಗವೇ ಪಂಚಮುಖವನೈದಿಹ ಸದಾಶಿವನೆಂದೆನಿಸಿತ್ತು.
ಆ ಸದಾಶಿವನಿಂದೆ ಬ್ರಹ್ಮ-ವಿಷ್ಣು-ರುದ್ರರೆಂಬ ತ್ರೈಮೂರ್ತಿಗಳುದಿಸಿದರು.
ಆ ತ್ರೈಮೂರ್ತಿಗಳಿಂದೆ ಸ್ವರ್ಗ-ಮರ್ತ್ಯ-ಪಾತಾಳಂಗಳೆಂಬ
ತ್ರೈಲೋಕಂಗಳು ಜನಿಸಿದವು.
ಆ ತ್ರೈಲೋಕಂಗಳ ಮಧ್ಯದಲ್ಲಿ ಸಚರಾಚರ ಹೆಣ್ಣುಗಂಡು
ನಾಮ ರೂಪ ಕ್ರಿಯಾದಿ ಸಕಲ ವಿಸ್ತಾರವಾಯಿತ್ತು.
ಇಂತಿವೆಲ್ಲವೂ ನಿಮ್ಮ ನೆನಹುಮಾತ್ರದಿಂದಾದವಯ್ಯ ಅಖಂಡೇಶ್ವರಾ.