Index   ವಚನ - 1122    Search  
 
ಕೃತಯುಗದಲ್ಲಿ ನೀನು ಸ್ಕಂದನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು. ತ್ರೇತಾಯುಗದಲ್ಲಿ ನೀನು ನೀಲಲೋಹಿತನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು. ದ್ವಾಪರದಲ್ಲಿ ನೀನು ವೃಷಭನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು. ಕಲಿಯುಗದಲ್ಲಿ ನೀನು ಬಸವನೆಂಬ ಗಣೇಶ್ವರನಾಗಿ, ಸರ್ವಾಚಾರ ಸಂಪನ್ನನಾಗಿ, ಭಕ್ತಿಜ್ಞಾನವ ಕಂದೆರವೆಯ ಮಾಡಿ, ಶಿವಾಚಾರದ ಘನದ ಬೆಳವಿಗೆಯ ಮಾಡಿ, ಶಿವಭಕ್ತಿಯ ಧ್ವಜವನೆತ್ತಿಸಿ ಮರ್ತ್ಯಲೋಕದೊಳಗೆ ಹರಿಹಿದ ಭೇದವ ಭೇದಿಸಿ ನೋಡಿ ಆನು ಅರಿದೆ. ಗುಹೇಶ್ವರ ಸಾಕ್ಷಿಯಾಗಿ ನಿನ್ನ ಮಹಾತ್ಮೆಗೆ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ.