Index   ವಚನ - 174    Search  
 
ಭಕ್ತನಾದಡೆ ನಿರ್ವಂಚಕಭಾವದಿಂದೆ ತ್ರಿವಿಧಕ್ಕೆ ತ್ರಿವಿಧಪದಾರ್ಥವನರ್ಪಿಸಬೇಕು. ಮಹೇಶ್ವರನಾದಡೆ ತ್ರಿವಿಧವ ಬಯಸದಿರಬೇಕು. ಪ್ರಸಾದಿಯಾದಡೆ ಹುಲ್ಲುಕಡ್ಡಿ ದರ್ಪಣ ಮೊದಲಾದ ಸಕಲಪದಾರ್ಥಂಗಳ ಲಿಂಗಕ್ಕೆ ಕೊಟ್ಟಲ್ಲದೆ ಕೊಳ್ಳದಿರಬೇಕು. ಪ್ರಾಣಲಿಂಗಿಯಾದಡೆ ಪ್ರಪಂಚ ನಾಸ್ತಿಯಾಗಿರಬೇಕು. ಶರಣನಾದಡೆ ಸಕಲ ಭೋಗೋಪಭೋಗಂಗಳನು ತಾನಿಲ್ಲದೆ ಲಿಂಗಮುಖವನರಿದು ಕೊಡಬೇಕು. ಐಕ್ಯನಾದಡೆ ಸರ್ವವೂ ತನ್ನೊಳಗೆಂದರಿದು ಸರ್ವರೊಳಗೆಲ್ಲ ತನ್ನನೆ ಕಾಣಬೇಕು. ಇಂತೀ ಷಟ್‍ಸ್ಥಲದ ಅನುವನರಿದು ಆಚರಿಸುವ ಮಹಾಶರಣರ ಆಳಿನ ಆಳು ನಾನಯ್ಯ ಅಖಂಡೇಶ್ವರಾ.