Index   ವಚನ - 235    Search  
 
ಕನಕ ಕಾಮಿನಿ ಭೂಮಿಗಾಗಿ ಹೊಡೆದಾಡಿ ಕೆಟ್ಟಿತೀ ಜಗವೆಲ್ಲ. ಇದ ಕಂಡು ಕೇಳಿ ನೀನೇತಕೆ ಇಚ್ಛಿಸುವೆ ಎಲೆ ಹುಚ್ಚು ಮನವೆ! ಹಗಲು ಕಂಡ ಕಮರಿಯ ಇರುಳು ಬೀಳುವರೆ? ಎಲೆ ಮರುಳು ಮನವೆ ಕೆಡಬೇಡ ಕೆಡಬೇಡ. ನಿನಗೊಂದು ಉಪಾಯವ ಹೇಳುವೆ ಕೇಳು ಎಲೆ ಮರುಳುಮನವೆ. ಜಗದ ಆಗು ಹೋಗನರಿತು ಜಗದೀಶ ಅಖಂಡೇಶ್ವರನ ನೆರೆನಂಬಿದೆಯಾದಡೆ ನಿನಗೆ ಜನನ ಮರಣಂಗಳು ವಿರಹಿತವಾಗಿ ಪರಮಪದವು ದೊರೆಕೊಂಬುದು ನೋಡಾ ಎಲೆ ಮನವೆ.