Index   ವಚನ - 241    Search  
 
ಎನ್ನ ಜನನಮರಣಂಗಳೆಲ್ಲ ಜಾರಿಹೋದವಯ್ಯ ನಿಮ್ಮ ನೆನಹಿನ ಬಲದಿಂದೆ. ಎನ್ನ ಪುಣ್ಯಪಾಪಂಗಳೆಲ್ಲ ಪಲ್ಲಟವಾದವಯ್ಯ ನಿಮ್ಮ ನೆನಹಿನ ಬಲದಿಂದೆ. ಎನ್ನ ಪಂಚೇಂದ್ರಿಯ ಸಪ್ತವ್ಯಸನಂಗಳೆಲ್ಲ ಸಣ್ಣಿಸಿ ಹೋದವಯ್ಯ ನಿಮ್ಮ ನೆನಹಿನ ಬಲದಿಂದೆ. ಎನ್ನ ಅಷ್ಟಮದ ಅರಿಷಡ್ವರ್ಗಂಗಳೆಲ್ಲ ನಷ್ಟವಾದವಯ್ಯ ನಿಮ್ಮ ನೆನಹಿನ ಬಲದಿಂದೆ. ಎನ್ನ ತನುಕರಣೇಂದ್ರಿಯಂಗಳೆಲ್ಲ ತರಹರವಾದವಯ್ಯ ನಿಮ್ಮ ನೆನಹಿನ ಬಲದಿಂದೆ. ಎನ್ನ ಮನ ಪ್ರಾಣ ಭಾವಂಗಳೆಲ್ಲ ಬರಿದಾಗಿ ಹೋದವಯ್ಯ ನಿಮ್ಮ ನೆನಹಿನ ಬಲದಿಂದೆ ಅಖಂಡೇಶ್ವರಾ.