Index   ವಚನ - 252    Search  
 
ಎನ್ನ ಜನನ ಸೂತಕ ಹೋಯಿತ್ತು ಶ್ರೀಗುರುವಿನ ಪಾಣಿಪದ್ಮದಲ್ಲಿ ಜನಿಸಿದೆನಾಗಿ. ಎನ್ನ ಜಾತಿಸೂತಕ ಹೋಯಿತ್ತು ಅಜಾತ ಲಿಂಗಸಂಗದಿಂದ. ಎನ್ನ ಕುಲಸೂತಕ ಹೋಯಿತ್ತು ಶಿವನಲ್ಲದೆ ಅನ್ಯದೈವವನರಿಯೆನಾಗಿ. ಎನ್ನ ಛಲಸೂತಕ ಹೋಯಿತ್ತು ಜೀವಭಾವವಿಲ್ಲವಾಗಿ. ಎನ್ನ ಮನಸೂತಕ ಹೋಯಿತ್ತು ನಿಮ್ಮ ನಾಮವ ನೆನೆನೆನೆದು. ಎನ್ನ ಕಂಗಳ ಸೂತಕ ಹೋಯಿತ್ತು ನಿಮ್ಮ ಮಂಗಳಸ್ವರೂಪವ ನೋಡಿ ನೋಡಿ. ಎನ್ನ ಕೈಯಸೂತಕ ಹೋಯಿತ್ತು ನಿಮ್ಮ ಮುಟ್ಟಿ ಪೂಜಿಸಿ ಪೂಜಿಸಿ. ಎನ್ನ ಕಿವಿಯ ಸೂತಕ ಹೋಯಿತ್ತು ನಿಮ್ಮ ಕೀರ್ತಿಯ ಕೇಳಿ ಕೇಳಿ. ಎನ್ನ ಜಿಹ್ವೆಯ ಸೂತಕ ಹೋಯಿತ್ತು ನಿಮ್ಮ ಪರಮಪ್ರಸಾದವ ಸವಿಸವಿದು. ಇಂತೀ ಸರ್ವಸೂತಕವ ಹರಿದು, ಪೂರ್ವಕಲ್ಪಿತಂಗಳ ಮೀರಿ. ನಿಮ್ಮೊಳಗೆ ನಿಜನಿಶ್ಚಿಂತನಿವಾಸಿಯಾಗಿರ್ದೆನಯ್ಯ ಅಖಂಡೇಶ್ವರಾ.