Index   ವಚನ - 260    Search  
 
ಪರಾತ್ಪರವಾದ ಪರಶಿವಬ್ರಹ್ಮವನೊಡಗೂಡುವ ಅವಿರಳ ಸಮರಸ ಸದ್ಭಕ್ತಿಯಿಲ್ಲದೆ ನಾನು ಬ್ರಹ್ಮವು ತಾನು ಬ್ರಹ್ಮವು ಎಂದು ಪರಬ್ರಹ್ಮದ ನಿಲವನರಿಯದೆ ಕೆಟ್ಟರು ನೋಡಾ ಹಲಬರು ಕೆಲಬರು. ಅವರಾರೆಂದೊಡೆ: ಅಹಂ ಬ್ರಹ್ಮವೆಂದು ನುಡಿದ ಸನತ್ಕುಮಾರಂಗೆ ಒಂಟೆವಿಧಿಯಾಯಿತ್ತು. ಅಹಂ ಬ್ರಹ್ಮವೆಂದು ನುಡಿದ ಹರಿವಿರಿಂಚಿಗಳಿಗೆ ಭವಬಂಧನವಾಯಿತ್ತು. ಅಹಂ ಬ್ರಹ್ಮವೆಂದು ನುಡಿದ ಇಂದ್ರಚಂದ್ರರಿಗೆ ಅಂಗದ ಕೊರತೆಯಾಯಿತ್ತು. ಅಹಂ ಬ್ರಹ್ಮವೆಂದು ನುಡಿದ ಮನುಮುನಿಗಳಿಗೆಲ್ಲ ಮರಣವಾಯಿತ್ತು. ಇದನರಿತು ಹಮ್ಮುಬಿಮ್ಮುವನಳಿದು, ಹೆಮ್ಮೆ ಹಿರಿತನವ ನೀಗಿ, ಪರಬ್ರಹ್ಮವನೊಡಗೂಡಿ ಸುಖಿಯಾಗಿರ್ಪರಯ್ಯ ನಿಮ್ಮ ಶರಣರು ಅಖಂಡೇಶ್ವರಾ.