Index   ವಚನ - 467    Search  
 
ದೇಹದ ವಾಸನೆ ಹರಿದು ಆತ್ಮನ ಭವಬಂಧನದ ಕೀಲಮುರಿದು ಪರಾತ್ಪರವಾದ ಪ್ರಾಣಲಿಂಗವನೊಡಗೂಡುವುದಕ್ಕೆ ಆವುದು ಸಾಧನವೆಂದೊಡೆ: ಎಲ್ಲ ಗಣಂಗಳು ತಿಳಿವಂತೆ ಹೇಳುವೆ ಕೇಳಿರಯ್ಯಾ. ಎಂಬತ್ತೆಂಟು ಆಸನದೊಳಗೆ ಮುಖ್ಯವಾಗಿರ್ಪುದು ಶಿವಸಿದ್ಧಾಸನವು. ಆ ಸಿದ್ಧಾಸನದ ವಿವರವೆಂತೆಂದೊಡೆ: ಗುದಗುಹ್ಯಮಧ್ಯಸ್ಥಾನವಾದ ಯೋನಿಮಂಡಲವೆಂಬ ಆಧಾರದ್ವಾರಕ್ಕೆ ಎಡದ ಹಿಮ್ಮಡವನಿಕ್ಕಿ, ಬಲದಹಿಮ್ಮಡವ ಮೇಢ್ರಸ್ಥಾನದಲ್ಲಿರಿಸಿ, ಅತ್ತಿತ್ತಲುಕದೆ ಬೆನ್ನೆಲವು ಕೊಂಕಿಸದೆ ನೆಟ್ಟನೆ ಕುಳ್ಳಿರ್ದು ಉಭಯಲೋಚನವನೊಂದು ಮಾಡಿ ಉನ್ಮನಿಯ ಸ್ಥಾನದಲ್ಲಿರಿಸಿ, ಘ್ರಾಣ ಜಿಹ್ವೆ ನೇತ್ರ ಶ್ರೋತ್ರ ತ್ವಕ್ ಹೃದಯವೆಂಬ ಆರು ದ್ವಾರಂಗಳನು ಆರಂಗುಲಿಗಳಿಂದೊತ್ತಲು ಮೂಲಾಧಾರದಲ್ಲಿರ್ದ ಮೂಲಾಗ್ನಿ ಪಟುತರಮಾಗಿ, ಪವನವನೊಡಗೂಡಿ ಮನವ ಸುತ್ತಿಕೊಂಡು ಊರ್ಧ್ವಕ್ಕೆ ಹೋಗಿ, ಉಭಯದಳದಲ್ಲಿರ್ದ ಮಹಾಲಿಂಗವನೊಡಗೂಡಿ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಗೊಂಡು ಅತಿಸೂಕ್ಷ್ಮವಾಗಿ ಅಂಗುಲಪ್ರಮಾಣವಾಗಿ ಶುದ್ಧತಾರೆಯಂತೆ ಕಂಗಳ ನೋಟಕ್ಕೆ ಕರತಲಾಮಲಕವಾಗಿ ಕಾಣಿಸುತಿರ್ಪ ಪ್ರಾಣಲಿಂಗದಲ್ಲಿ ಪ್ರಾಣನ ಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಸಂಬಂಧಿ. ಆತನೇ ಪ್ರಳಯವಿರಹಿತನಯ್ಯಾ ಅಖಂಡೇಶ್ವರಾ.