ಎನ್ನಂತರಂಗದ ಆರು ಭುವನದ ಮೇಲೆ ತೋರುತಿರ್ಪ
ಮಹಾಕೈಲಾಸದ ಮೂರು ಮಂಡಲದಲ್ಲಿ
[ನಾಲ್ಕು] ಎಂಟು ಹದಿನಾರು ಮೂವತ್ತೆರಡು ತಂಡದಲ್ಲಿ
ನಿಂದು ಓಲಗಂಗೊಡುತಿರ್ಪರು ಸಕಲಗಣಂಗಳು ನಿಮಗೆ.
ಎನ್ನ ಮನ ಬುದ್ದಿ ಚಿತ್ತ ಅಹಂಕಾರಂಗಳು
ನಿಮ್ಮ ಮಂತ್ರಿ ಪ್ರಧಾನಿಗಳಾಗಿರ್ಪರು.
ಎನ್ನ ದಶವಾಯುಗಳು ನಿಮಗೆ ಹಸನಾಗಿ
ಗಾಳಿಯ ಢಾಳಿಸುತಿರ್ಪರು.
ಎನ್ನ ಅರಿಷಡ್ವರ್ಗಂಗಳು ನಿಮ್ಮ ಹೊಗಳುವ ಭಟಾಳಿಗಳಾಗಿ
ನಿಮ್ಮ ನಾಮಮಂತ್ರಂಗಳ ಕೊಂಡಾಡುತಿರ್ಪರು.
ಎನ್ನ ಚರಣಂಗಳು ನಿಮ್ಮ ಪ್ರದಕ್ಷಿಣೆಯ ಮಾಡುತಿರ್ಪವು.
ಎನ್ನ ಹಸ್ತಂಗಳು ನಿಮ್ಮ ಶ್ರೀಪಾದವ ಪೂಜಿಸುತ್ತಿರ್ಪವು.
ಎನ್ನ ಗುಹ್ಯ ನಿಮಗಾನಂದಸ್ಥಾನವಾಗಿರ್ಪುದು.
ಎನ್ನ ಪಾಯು ನಿಮಗೆ ವಿಸರ್ಜನ ಕೃತ್ಯಕ್ಕನುವಾಗಿರ್ಪುದು.
ಎನ್ನ ತ್ವಕ್ಕು ನಿಮಗೆ ಹಾಸಿಗೆಯ ಸುಖವನುಂಟುಮಾಡುತಿರ್ಪುದು.
ಎನ್ನ ಕರ್ಣವು ನಿಮಗೆ ನಾದವ ಕೇಳಿಸುತಿರ್ಪುದು.
ಎನ್ನ ಕಂಗಳು ನಿಮಗೆ ನಾನಾ ವಿಚಿತ್ರ ರೂಪವ ತೋರುತಿರ್ಪವು.
ಎನ್ನ ಘ್ರಾಣವು ನಿಮಗೆ ಗಂಧ ಪರಿಣಾಮ ಮುಡಿಸುತಿರ್ಪುದು.
ಎನ್ನ ಜಿಹ್ವೆ ನಿಮಗೆ ಷಡುರಸ ಪಂಚಕಜ್ಜಾಯಗಳ ದ್ರವ್ಯವ
ಭೋಜನಕೆ ಎಡೆ ಮಾಡುತಿರ್ಪುದು.
ಎನ್ನ ಸಕಲ ಕರಣಂಗಳು
ನಿಮ್ಮ ನಿಜ ಸೇವೆಯನೆ ಮಾಡುತಿರ್ಪವು.
ಇಂತೀ ನಾನಾ ತೆರದಿಂದಾಗುವ ನಿಮ್ಮ
ಓಲಗದ ಒಡ್ಡವಣೆಯ ಕಂಡು,
ಹೋದುದ ಬಂದುದನರಿಯದೆ
ಸಂಪಿಗೆಯ ಪುಷ್ಪಕ್ಕೆರಗಿದ ಭ್ರಮರನಂತೆ
ನಿಮ್ಮೊಳಗೆ ಪರವಶವಾಗಿರ್ದೆನಯ್ಯಾ ಅಖಂಡೇಶ್ವರಾ.