ಯೋಗ ಯೋಗವೆಂದು ನುಡಿಯುತಿರ್ಪರೆಲ್ಲರು;
ಯೋಗದೊಳಗಣ ಯೋಗವನಾರೂ ಅರಿಯರಲ್ಲ!
ಮಂತ್ರಯೋಗ, ಲಯಯೋಗ,
ಹಠಯೋಗ, ರಾಜಯೋಗವೆಂದು
ಯೋಗ ಚತುರ್ವಿಧದೊಳಗೆ,
ಮೊದಲು ಮಂತ್ರಯೋಗದ ಭೇದವೆಂತೆಂದೊಡೆ:
ಆವನಾನೊಬ್ಬ ಯೋಗಸಿದ್ಧಿಯ ಪಡೆವಾತನು
ಪಕ್ಷಿಗಳುಲಿಯದ ಮುನ್ನ, ಪಶುಗಳು ಕೂಗದ ಮುನ್ನ,
ಪ್ರಕೃತಿ ಆತ್ಮರು ಸುಳಿಯದ ಮುನ್ನ,
ಶುಭಮುಹೂರ್ತದಲ್ಲಿ ಶಿವಧ್ಯಾನಮಂ ಮಾಡುತೆದ್ದು
ಶೌಚಾಚಮನ ದಂತಧಾವನಂಗಳಂ ಮಾಡಿ ಜಲಸ್ನಾನಂಗೈದು,
ಏಕಾಂತಸ್ಥಳದಲ್ಲಿ ಕಂಬಳಾಸನದಿ ಗದ್ದುಗೆಯಲ್ಲಿ
ಪೂರ್ವಮುಖವಾಗಲಿ ಉತ್ತರಮುಖವಾಗಲಿ
ತನಗಿಷ್ಟಾಸನದಲ್ಲಿ ಕುಳ್ಳಿರ್ದು, ಭಸ್ಮಸ್ನಾನಂಗಳನಾಚರಿಸಿ
ಆಗಮೋಕ್ತದಿಂದೆ ಈಶ್ವರಾರ್ಚನೆಯಂ ಮಾಡಿ
ಬಳಿಕ ಅಂತರಾಳಹೃದಯಕಮಲ ಕರ್ಣಿಕಾಸ್ಥಲದಲ್ಲಿಹ
ಹಕಾರವೆಂಬ ಬೀಜಾಕ್ಷರಮಧ್ಯದಲ್ಲಿ
ಮೂರ್ತಿಧ್ಯಾನಂ ಮಾಡುವುದೆಂತೆನೆ:
ಶುದ್ಧಪದ್ಮಾಸನನಾಗಿ ಚಂದ್ರಕಲಾಧರನಾದ
ಪಂಚಮುಖ ತ್ರಿನೇತ್ರಂಗಳುಳ್ಳ
ಶೂಲ ವಜ್ರ ಖಡ್ಗ ಪರಶು ಅಭಯಂಗಳಾಂತ
ಪಂಚ ದಕ್ಷಿಣಹಸ್ತಂಗಳುಳ್ಳ
ನಾಗ ಪಾಶ ಘಂಟೆ ಅನಲ ಅಂಕುಶಂಗಳಾಂತ
ಪಂಚ ವಾಮಕರಂಗಳುಳ್ಳ
ಕಿರೀಟಾದ್ಯಾಭರಣಂಗಳಿಂದಲಂಕೃತನಾದ
ಸ್ಫಟಿಕದ ಕಾಂತಿಮಯನಾದ ಸದಾಶಿವಮೂರ್ತಿಯ ಧ್ಯಾನಿಸುತ್ತೆ,
ಓಂ ಅಸ್ಯ ಶ್ರೀಷಡಕ್ಷರಮಂತ್ರಸ್ಯ ವಾಮದೇವ ಋಷಿಃ
ಪಂಕ್ತಿಃ ಛಂದಃ ಶ್ರೀಸದಾಶಿವೋ ದೇವತಾ
ಓಂ ಬೀಜಂ ಉಮಾಶಕ್ತಿಃ ಉದಾತ್ತಸ್ವರಃ
ಶ್ವೇತವರ್ಣಃ ಸದಾಶಿವಪ್ರೀತ್ಯರ್ಥೇ ಜಪೇ ವಿನಿಯೋಗಃ|''
ಎಂಬ ಷಡಕ್ಷರಮಂತ್ರಾನುಷ್ಠಾನಾದಿ ಅಖಿಳಮಂತ್ರಗಳಿಂದೆ
ಕರಶಿರಾದಿ ಷಡಂಗನ್ಯಾಸಂಗಳಂ ಮಾಡಿ
ನಿತ್ಯಜಪಾನುಷ್ಠಾನಮಂ ಮೋಕ್ಷಾರ್ಥಿಯಾದಾತನು
ರುದ್ರಾಕ್ಷಿ ನೂರೆಂಟರಿಂದಾದಡೂ ಇಪ್ಪತ್ತೈದರಿಂದಾದಡೂ
ಆಗಮೋಕ್ತಮಾರ್ಗದಿಂದೆ ಜಪಮಾಲಿಕೆಯಿಂದೆ
ಅಂಗುಷ್ಠಮಧ್ಯಮೆಗಳಿಂದೆ ಉಪಾಂಶುರೂಪದಿಂದೆ
ಧ್ಯಾನಪೂರ್ವಕದಿಂ ಜಪವಂ ಮಾಡುವುದೆ
ಮಂತ್ರಯೋಗವೆನಿಸಿತ್ತು ಅಖಂಡೇಶ್ವರಾ.
Art
Manuscript
Music
Courtesy:
Transliteration
Yōga yōgavendu nuḍiyutirparellaru;
yōgadoḷagaṇa yōgavanārū ariyaralla!
Mantrayōga, layayōga,
haṭhayōga, rājayōgavendu
yōga caturvidhadoḷage,
modalu mantrayōgada bhēdaventendoḍe:
Āvanānobba yōgasid'dhiya paḍevātanu
pakṣigaḷuliyada munna, paśugaḷu kūgada munna,
prakr̥ti ātmaru suḷiyada munna,
śubhamuhūrtadalli śivadhyānamaṁ māḍuteddu
śaucācamana dantadhāvanaṅgaḷaṁ māḍi jalasnānaṅgaidu,
ēkāntasthaḷadalli kambaḷāsanadi gaddugeyalli
pūrvamukhavāgali uttaramukhavāgali
Tanagiṣṭāsanadalli kuḷḷirdu, bhasmasnānaṅgaḷanācarisi
āgamōktadinde īśvarārcaneyaṁ māḍi
baḷika antarāḷahr̥dayakamala karṇikāsthaladalliha
hakāravemba bījākṣaramadhyadalli
mūrtidhyānaṁ māḍuvudentene:
Śud'dhapadmāsananāgi candrakalādharanāda
pan̄camukha trinētraṅgaḷuḷḷa
śūla vajra khaḍga paraśu abhayaṅgaḷānta
pan̄ca dakṣiṇahastaṅgaḷuḷḷa
nāga pāśa ghaṇṭe anala aṅkuśaṅgaḷānta
pan̄ca vāmakaraṅgaḷuḷḷa
kirīṭādyābharaṇaṅgaḷindalaṅkr̥tanāda
sphaṭikada kāntimayanāda sadāśivamūrtiya dhyānisutte,
Ōṁ asya śrīṣaḍakṣaramantrasya vāmadēva r̥ṣiḥ
paṅktiḥ chandaḥ śrīsadāśivō dēvatā
ōṁ bījaṁ umāśaktiḥ udāttasvaraḥ
śvētavarṇaḥ sadāśivaprītyarthē japē viniyōgaḥ|''
emba ṣaḍakṣaramantrānuṣṭhānādi akhiḷamantragaḷinde
karaśirādi ṣaḍaṅgan'yāsaṅgaḷaṁ māḍi
nityajapānuṣṭhānamaṁ mōkṣārthiyādātanu
rudrākṣi nūreṇṭarindādaḍū ippattaidarindādaḍū
āgamōktamārgadinde japamālikeyinde
aṅguṣṭhamadhyamegaḷinde upānśurūpadinde
dhyānapūrvakadiṁ japavaṁ māḍuvude
mantrayōgavenisittu akhaṇḍēśvarā.