Index   ವಚನ - 493    Search  
 
ಇನ್ನು ಯೋಗೀಶ್ವರರ ಧ್ಯಾನಯೋಗಕ್ಕೆ ಸ್ಥಾನಂಗಳಾವುವೆನೆ: ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯ ಭ್ರೂಮಧ್ಯಾದಿ ಸ್ಥಾನಂಗಳಲ್ಲಿ ಬಂಧಮುದ್ರೆಗಳಿಂದೆ ಧ್ಯಾನಮಂ ಮಾಳ್ಪುದೆಂತೆನೆ: ಆಧಾರಚಕ್ರಗಳ ನಾಲ್ಕೆಸಳಮಧ್ಯದಲ್ಲಿ ಇಷ್ಟಾರ್ಥಮಂ ಕೊಡುವ ಸುವರ್ಣ ಕಾಂತಿಯನುಳ್ಳ ಆಧಾರಶಕ್ತಿಯಂ ಧ್ಯಾನಿಸುವುದು. ಸ್ವಾಧಿಷ್ಠಾನಚಕ್ರ ಆರೆಸಳಮಧ್ಯದಲ್ಲಿ ಸಕಲವರ್ಣದಿಂ ಲಿಂಗಸ್ವರೂಪನಾದ ಶಿವನಂ ಧ್ಯಾನಿಸುವುದು. ಮಣಿಪೂರಕಚಕ್ರ ಹತ್ತೆಸಳಮಧ್ಯದಲ್ಲಿ ಸುಪ್ತ ಸರ್ಪಾಕಾರದ ಮಿಂಚಿಗೆ ಸಮಾನದೀಪ್ತಿಯುಳ್ಳ ಸಕಲಸಿದ್ಧಿಗಳಂ ಕೊಡುವ ಕುಂಡಲಿಶಕ್ತಿಯಂ ಧ್ಯಾನಿಸುವುದು. ಅನಾಹತಚಕ್ರ ಹನ್ನೆರಡೆಸಳಮಧ್ಯದಲ್ಲಿ ಜ್ಯೋತಿರ್ಮಯಲಿಂಗಮಂ ಧ್ಯಾನಿಸುವುದು. ವಿಶುದ್ಧಿಚಕ್ರ ಷೋಡಶದಳಮಧ್ಯದಲ್ಲಿ ಸುಸ್ಥಿರಮಾದ ಆನಂದರೂಪಿಣಿಯಾದ ಸುಷುಮ್ನೆಯಂ ಧ್ಯಾನಿಸುವುದು. ಆಜ್ಞಾಚಕ್ರ ದ್ವಿದಳಮಧ್ಯದಲ್ಲಿ ವಾಕ್ಸಿದ್ಧಿಯಂ ಕೊಡುವ ದೀಪದ ಜ್ವಾಲೆಗೆ ಸಮಾನವಾದ ಜ್ಞಾನನೇತ್ರವೆನಿಸುವ ಶುದ್ಧಪ್ರಸಾದಜ್ಯೋತಿಯಂ ಧ್ಯಾನಿಸುವುದೇ ಧ್ಯಾನಯೋಗ ನೋಡಾ ಅಖಂಡೇಶ್ವರಾ.