ನೇತ್ರದ ಸೂತ್ರದಲ್ಲಿ
ಸಕಲ ವಿಸ್ತಾರದ ರೂಪಿರ್ಪುದನಾರೂ ಅರಿಯರಲ್ಲ!
ಅದೆಂತೆಂದೊಡೆ: ನೇತ್ರದೇವೋ ನ ಚ ಪರಃ''
ಎಂಬ ಶ್ರುತಿ ಸಾಕ್ಷಿಯಾಗಿ ನೇತ್ರವೆ ಶಿವನೆಂದರಿದು,
ಆ ಶಿವನಿರ್ದಲ್ಲಿಯೆ ಕೈಲಾಸ ಮೇರು ಮಂದರವಿರ್ಪುವು.
ಆ ಶಿವನಿರ್ದಲ್ಲಿಯೆ ಸಕಲಪ್ರಮಥಗಣಂಗಳಿರ್ಪರು.
ಆ ಶಿವನಿರ್ದಲ್ಲಿಯೆ ಸಕಲತೀರ್ಥಕ್ಷೇತ್ರಂಗಳಿರ್ಪುವು.
ಆ ಶಿವನಿರ್ದಲ್ಲಿಯೆ ಸಕಲವೇದವೇದಾಂತಗಳಿರ್ಪುವು.
ಆ ಶಿವನಿರ್ದಲ್ಲಿಯೆ ಸಕಲ ಸಚರಾಚರಂಗಳಿರ್ಪುವು.
ಇಂತೀ ಸಕಲವಿಸ್ತಾರವನೊಳಕೊಂಡ
ನೇತ್ರದ ನಿಲವು ನೀನೇ ಅಯ್ಯಾ ಅಖಂಡೇಶ್ವರಾ.