ಭಾವವೇ ಬ್ರಹ್ಮವಾದ ಬಳಿಕ
ಇನ್ನಾವ ವೇಷವ ತೊಡಲೇತಕೋ?
ತನುವೇ ಲಿಂಗವಾದ ಬಳಿಕ
ಆವ ಫಲಪದದ ಹಂಗೇತಕೊ?
ಮನದಲ್ಲಿ ತನಗೆ ತಾನೆ ಸ್ವಾತ್ಮಜ್ಞಾನ ಉದಯವಾದ ಬಳಿಕ
ಇನ್ನು ಹಲವು ಶಾಸ್ತ್ರವನೋದಿ
ತಿಳಿಯಬೇಕೆಂಬ ಸಂದೇಹವೇತಕೋ?
ಒಳಹೊರಗೆ ಸರ್ವಾಂಗದಲ್ಲಿ
ಮಹಾಜ್ಞಾನವೆ ತುಂಬಿದ ಬಳಿಕ
ಮುಂದೆ ಮುಕ್ತಿಯ ಪಡೆಯಬೇಕೆಂಬ ಭ್ರಾಮಕವೇತಕೋ?
ಇದು ಸತ್ಯದ ನಡೆಯಲ್ಲ; ಶರಣರ ಮೆಚ್ಚಲ್ಲ;
ನಮ್ಮ ಅಖಂಡೇಶ್ವರನ ಒಲುಮೆ ಮುನ್ನವೆ ಅಲ್ಲ.