Index   ವಚನ - 531    Search  
 
ಕರ್ಮಸಾದಾಖ್ಯಸ್ವರೂಪವಾದ ಆಚಾರಲಿಂಗದಲ್ಲಿ ನಕಾರಮಂತ್ರಸ್ವರೂಪವಾದ ಘ್ರಾಣೇಂದ್ರಿಯ ಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಕರ್ತೃಸಾದಾಖ್ಯಸ್ವರೂಪವಾದ ಗುರುಲಿಂಗದಲ್ಲಿ ಮಕಾರಮಂತ್ರಸ್ವರೂಪವಾದ ಜಿಹ್ವೇಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಮೂರ್ತಿಸಾದಾಖ್ಯಸ್ವರೂಪವಾದ ಶಿವಲಿಂಗದಲ್ಲಿ ಶಿಕಾರಮಂತ್ರಸ್ವರೂಪವಾದ ನೇತ್ರೇಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಅಮೂರ್ತಿಸಾದಾಖ್ಯಸ್ವರೂಪವಾದ ಜಂಗಮಲಿಂಗದಲ್ಲಿ ವಕಾರಮಂತ್ರಸ್ವರೂಪವಾದ ತ್ವಗಿಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಶಿವಸಾದಾಖ್ಯಸ್ವರೂಪವಾದ ಪ್ರಸಾದಲಿಂಗದಲ್ಲಿ ಯಕಾರಮಂತ್ರಸ್ವರೂಪವಾದ ಶ್ರವಣೇಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಮಹಾಸಾದಾಖ್ಯಸ್ವರೂಪವಾದ ಮಹಾಲಿಂಗದಲ್ಲಿ ಓಂಕಾರಮಂತ್ರಸ್ವರೂಪವಾದ ಹೃದಿಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಇಂತೀ ಷಡ್ವಿಧಲಿಂಗದಲ್ಲಿ ಷಡಿಂದ್ರಿಯಂಗಳ ಸಂಯೋಗಮಾಡಿ, ಆ ಷಡ್ವಿಧ ಲಿಂಗಂಗಳೊಂದಾದ ಮಹಾಘನವೆ ತಾನಾಗಿ ಸುಳಿಯಬಲ್ಲಾತನೆ ಪ್ರಾಣಲಿಂಗಸಂಬಂಧಿಯಯ್ಯಾ ಅಖಂಡೇಶ್ವರಾ.