ಬಚ್ಚಬರಿಯ ಬಯಲೊಳಗೊಂದು
ಅಚ್ಚ ಅಂಕುರ ಹುಟ್ಟಿ ಅಣುಚಕ್ರವೆನಿಸಿತ್ತು.
ಆ ಅಣುಚಕ್ರದಿಂದಾಯಿತ್ತು ಪಶ್ಚಿಮಚಕ್ರ.
ಆ ಪಶ್ಚಿಮಚಕ್ರದಿಂದಾಯಿತ್ತು ಶಿಖಾಚಕ್ರ.
ಆ ಶಿಖಾಚಕ್ರದಿಂದಾಯಿತ್ತು ಬ್ರಹ್ಮಚಕ್ರ.
ಆ ಬ್ರಹ್ಮಚಕ್ರದಿಂದಾಯಿತ್ತು ಆಜ್ಞಾಚಕ್ರ.
ಆ ಆಜ್ಞಾಚಕ್ರದಿಂದಾಯಿತ್ತು ವಿಶುದ್ಧಿಚಕ್ರ.
ಆ ವಿಶುದ್ಧಿಚಕ್ರದಿಂದಾಯಿತ್ತು ಅನಾಹತಚಕ್ರ.
ಆ ಅನಾಹತಚಕ್ರದಿಂದಾಯಿತ್ತು ಮಣಿಪೂರಕಚಕ್ರ.
ಆ ಮಣಿಪೂರಕಚಕ್ರದಿಂದಾಯಿತ್ತು ಸ್ವಾಧಿಷ್ಠಾನಚಕ್ರ.
ಆ ಸ್ವಾಧಿಷ್ಠಾನಚಕ್ರದಿಂದಾಯಿತ್ತು ಆಧಾರಚಕ್ರ.
ಆ ಆಧಾರಚಕ್ರಕ್ಕೆ ಚತುರ್ದಳ.
ಆ ಚತುರ್ದಳದಲ್ಲಿ ಚತುರಕ್ಷರಂಗಳು.
ಆ ಚತುರಕ್ಷರಂಗಳ ಮಧ್ಯ ಬೀಜಾಕ್ಷರವೇ ನಕಾರಪ್ರಣವ.
ಆ ನಕಾರಪ್ರಣವಪೀಠದ ಮೇಲೆ
ಬೆಳಗುತಿರ್ಪುದು ಆಚಾರಲಿಂಗ.
ಅದರಿಂದ ಮೇಲೆ ಸ್ವಾಧಿಷ್ಠಾನಚಕ್ರವಿರ್ಪುದು.
ಆ ಚಕ್ರಕ್ಕೆ ಷಡುದಳ.
ಆ ಷಡುದಳಂಗಳಲ್ಲಿ ಷಡಕ್ಷರಂಗಳು.
ಆ ಷಡಕ್ಷರಂಗಳ ಮಧ್ಯ ಬೀಜಾಕ್ಷರವೇ ಮಕಾರಪ್ರಣವ.
ಆ ಮಕಾರಪ್ರಣವಪೀಠದ ಮೇಲೆ
ಬೆಳಗುತಿರ್ಪುದು ಗುರುಲಿಂಗ.
ಅದರಿಂದ ಮೇಲೆ ಮಣಿಪೂರಕಚಕ್ರವಿರ್ಪುದು.
ಆ ಚಕ್ರಕ್ಕೆ ದಶದಳ.
ಆ ದಶದಳಂಗಳಲ್ಲಿ ದಶಾಕ್ಷರಂಗಳು.
ಆ ದಶಾಕ್ಷರಂಗಳ ಮಧ್ಯ
ಬೀಜಾಕ್ಷರವೇ ಶಿಕಾರಪ್ರಣವ.
ಆ ಶಿಕಾರ ಪ್ರಣವ ಪೀಠದ ಮೇಲೆ
ಬೆಳಗುತಿರ್ಪುದು ಶಿವಲಿಂಗ.
ಅದರಿಂದ ಮೇಲೆ ಅನಾಹತಚಕ್ರವಿರ್ಪುದು.
ಆ ಚಕ್ರಕ್ಕೆ ದ್ವಾದಶದಳ.
ಆ ದ್ವಾದಶದಳಂಗಳಲ್ಲಿ ದ್ವಾದಶಾಕ್ಷರಂಗಳು.
ಆ ದ್ವಾದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ವಕಾರಪ್ರಣವ.
ಆ ವಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಜಂಗಮಲಿಂಗ.
ಅದರಿಂದ ಮೇಲೆ ವಿಶುದ್ಧಿಚಕ್ರವಿರ್ಪುದು.
ಆ ಚಕ್ರಕ್ಕೆ ಷೋಡಶದಳ.
ಆ ಷೋಡಶದಳಂಗಳಲ್ಲಿ ಷೋಡಶಾಕ್ಷರಂಗಳು.
ಆ ಷೋಡಶಾಕ್ಷರಂಗಳ
ಮಧ್ಯ ಬೀಜಾಕ್ಷರವೇ ಯಕಾರಪ್ರಣವ.
ಆ ಯಕಾರಪ್ರಣವಪೀಠದ ಮೇಲೆ
ಬೆಳಗುತಿರ್ಪುದು ಪ್ರಸಾದಲಿಂಗ.
ಅದರಿಂದ ಮೇಲೆ ಆಜ್ಞಾಚಕ್ರವಿರ್ಪುದು.
ಆ ಚಕ್ರಕ್ಕೆ ದ್ವಿದಳ.
ಆ ದ್ವಿದಳಂಗಳಲ್ಲಿ ದ್ವಯಾಕ್ಷರಂಗಳು.
ಆ ದ್ವಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಓಂಕಾರಪ್ರಣವ.
ಆ ಓಂಕಾರಪ್ರಣವಪೀಠದ ಮೇಲೆ
ಬೆಳಗುತಿರ್ಪುದು ಮಹಾಲಿಂಗ.
ಅದರಿಂದ ಮೇಲೆ ಬ್ರಹ್ಮಚಕ್ರವಿರ್ಪುದು.
ಆ ಚಕ್ರಕ್ಕೆ ಸಹಸ್ರದಳ.
ಆ ಸಹಸ್ರದಳಂಗಳಲ್ಲಿ ಸಹಸ್ರಾಕ್ಷರಂಗಳು.
ಆ ಸಹಸ್ರಾಕ್ಷರಂಗಳ ಮಧ್ಯ
ಬೀಜಾಕ್ಷರವೇ ನಿಷ್ಕಲಪ್ರಣವ.
ಆ ನಿಷ್ಕಲಪ್ರಣವಪೀಠದ ಮೇಲೆ
ಬೆಳಗುತಿರ್ಪುದು ನಿಷ್ಕಲಲಿಂಗ.
ಅದರಿಂದ ಮೇಲೆ ಶಿಖಾಚಕ್ರವಿರ್ಪುದು.
ಆ ಚಕ್ರಕ್ಕೆ ತ್ರಿದಳ.
ಆ ತ್ರಿದಳಂಗಳಲ್ಲಿ ತ್ರಯಾಕ್ಷರಂಗಳು.
ಆ ತ್ರಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶೂನ್ಯಪ್ರಣವ.
ಆ ಶೂನ್ಯಪ್ರಣವಪೀಠದ ಮೇಲೆ
ಬೆಳಗುತಿರ್ಪುದು ಶೂನ್ಯಲಿಂಗ.
ಅದರಿಂದ ಮೇಲೆ ಪಶ್ಚಿಮಚಕ್ರವಿರ್ಪುದು.
ಆ ಚಕ್ರಕ್ಕೆ ಏಕದಳ.
ಆ ಏಕದಳದಲ್ಲಿ ಸರ್ವರಂಜನೆಯನೊಳಕೊಂಡು
ವಾಚಾತೀತವೆನಿಸುವ ನಿರಂಜನಪ್ರಣವ.
ಆ ನಿರಂಜನ ಪ್ರಣವಪೀಠದ ಮೇಲೆ
ಬೆಳಗುತಿರ್ಪುದು ನಿರಂಜನಲಿಂಗ.
ಇಂತೀ ತರುವಾಯದಿಂದೆ
ಆಧಾರ ಸ್ವಾಧಿಷ್ಠಾನದಲ್ಲಿ ಲಯ,
ಆ ಸ್ವಾಧಿಷ್ಠಾನ ಮಣಿಪೂರಕದಲ್ಲಿ ಲಯ.
ಆ ಮಣಿಪೂರಕ ಅನಾಹತದಲ್ಲಿ ಲಯ.
ಆ ಅನಾಹತ ವಿಶುದ್ಧಿಯಲ್ಲಿ ಲಯ.
ಆ ವಿಶುದ್ಧಿ ಆಜ್ಞೆಯಲ್ಲಿ ಲಯ.
ಆ ಆಜ್ಞೆ ಬ್ರಹ್ಮಚಕ್ರದಲ್ಲಿ ಲಯ.
ಆ ಬ್ರಹ್ಮಚಕ್ರ ಶಿಖಾಚಕ್ರದಲ್ಲಿ ಲಯ.
ಆ ಶಿಖಾಚಕ್ರ ಪಶ್ಚಿಮಚಕ್ರದಲ್ಲಿ ಲಯ.
ಆ ಪಶ್ಚಿಮಚಕ್ರ ಅಣುಚಕ್ರದಲ್ಲಿ ಲಯ.
ಆ ಅಣುಚಕ್ರ ನಿರವಯಲಲ್ಲಿ ಲಯ.
ಆ ನಿರವಯಲು ನಿಜವ ಕೂಡಿ ಸಹಜವಾದಲ್ಲಿ
ಅಖಂಡೇಶ್ವರನೆಂಬ ಶಬ್ದ ಮುಗ್ಧವಾಯಿತ್ತು.