Index   ವಚನ - 549    Search  
 
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಅಖಂಡವೆಂಬ ಆರು ಲಕ್ಷಣಯುಕ್ತವಾದ ಮಹಾಲಿಂಗವೇ ಪತಿ, ನಾನೇ ಶರಣಸತಿ ಎಂಬ ದೃಢಬುದ್ಧಿ ನಿಶ್ಚಲವಾಗಿರಬೇಕು. ಮತ್ತೆ ತಾನೇ ಸರ್ವಾಧಾರ ಪರಮಸ್ವತಂತ್ರನು ಎಂಬ ಭಾವ ಇಂಬುಗೊಂಡಿರಬೇಕು. ಅಂಗಭೋಗೋಪಭೋಗಂಗಳೆಲ್ಲ ಹಿಂದುಳಿದಿರಬೇಕು. ಲಿಂಗಭೋಗೋಪಭೋಗಂಗಳೆಲ್ಲ ಮುಂದುಗೊಂಡಿರ್ಪಾತನೆ ಶರಣ ನೋಡಾ! ಅದೆಂತೆಂದೊಡೆ: ಪತಿರ್ಲಿಂಗಂ ಸತೀಚಾಹಂ ಹೃದಿಯುಕ್ತಃ ಸ್ವಯಂ ಪ್ರಭುಃ | ಪಂಚೇಂದ್ರಿಯ ಸುಖಂ ನಾಸ್ತಿ ಶರಣಸ್ಥಲಮುತ್ತಮಮ್ ||'' ಎಂದುದಾಗಿ, ಇಂತಪ್ಪ ಮಹಾಶರಣರ ಸಂಗದಲ್ಲಿರಿಸಿ ಸಲಹಯ್ಯ ಎನ್ನ ಅಖಂಡೇಶ್ವರಾ.