Index   ವಚನ - 601    Search  
 
ಎಲೆ ಶಿವನೆ ನಿಮ್ಮಲ್ಲಿ ನಾನೊಂದ ಬೇಡಿಕೊಂಬೆನು, ನೀವೊಲಿದು ಕರುಣಿಸಯ್ಯಾ ಎನಗೆ. ನಿಮ್ಮ ಶರಣರ ಸಚ್ಚರಿತ್ರದ ಘನಮಹಿಮೆಯ ಕೇಳುವಲ್ಲಿ ಎನ್ನ ಹೃದಯಕಮಲವು ಅರಳುವಂತೆ ಮಾಡಯ್ಯಾ. ನಿಮ್ಮ ಶರಣರ ನಿಜಮೂರ್ತಿಗಳ ಕಂಡಲ್ಲಿ ಎನ್ನ ಸರ್ವಾಂಗವು ಗುಡಿಗಟ್ಟಿ ಕಂಗಳಲ್ಲಿ ಪರಿಣಾಮಜಲವುಕ್ಕಿ ಅವರ ಚರಣಕಮಲದ ಮೇಲೆ ಸುರಿವಂತೆ ಮಾಡಯ್ಯಾ. ನಿಮ್ಮ ಶರಣರು ಶಿವಾನುಭವಸಂಪಾದನೆಯ ಮಾಡುವಲ್ಲಿ ಎನ್ನ ಕರ್ಣದ್ವಯದಲ್ಲಿ ಸಕಲಕರಣಂಗಳು ನಾ ಮುಂಚೆ ತಾ ಮುಂಚೆ ಎಂದಾಗ್ರಹಿಸುವಂತೆ ಮಾಡಯ್ಯಾ. ನಿಮ್ಮ ನಿಜವನಿಂಬುಗೊಂಡ ಶರಣರ ಸಂಗದಲ್ಲಿ ಹೆರೆಹಿಂಗದಿರುವಂತೆ ಮಾಡಯ್ಯಾ ಎನ್ನ ಅಖಂಡೇಶ್ವರಾ.