Index   ವಚನ - 632    Search  
 
ಬಸವನ ನಾಮವು ಕಾಮಧೇನು ಕಾಣಿರೊ. ಬಸವನ ನಾಮವು ಕಲ್ಪವೃಕ್ಷ ಕಾಣಿರೊ. ಬಸವನ ನಾಮವು ಚಿಂತಾಮಣಿ ಕಾಣಿರೊ. ಬಸವನ ನಾಮವು ಪರುಷದಖಣಿ ಕಾಣಿರೊ. ಬಸವನ ನಾಮವು ಸಂಜೀವನಮೂಲಿಕೆ ಕಾಣಿರೊ. ಇಂತಪ್ಪ ಬಸವನಾಮಾಮೃತವು ಎನ್ನ ಜಿಹ್ವೆಯತುಂಬಿ ಹೊರಸೂಸಿ ಮನವ ತುಂಬಿತ್ತು. ಆ ಮನವತುಂಬಿ ಹೊರಸೂಸಿ ಸಕಲಕರಣೇಂದ್ರಿಯಂಗಳ ತುಂಬಿತ್ತು. ಆ ಸಕಲ ಕರಣೇಂದ್ರಿಯಂಗಳ ತುಂಬಿ ಹೊರಸೂಸಿ ಸರ್ವಾಂಗದ ರೋಮಕುಳಿಗಳನೆಲ್ಲ ವೇಧಿಸಿತ್ತಾಗಿ ನಾನು ಬಸವಾಕ್ಷರವೆಂಬ ಹಡಗವೇರಿ ಬಸವ ಬಸವ ಬಸವಾ ಎಂದು ಭವಸಾಗರವ ದಾಟಿದೆನಯ್ಯಾ ಅಖಂಡೇಶ್ವರಾ.