Index   ವಚನ - 642    Search  
 
ಲಿಂಗಾಂಗಸಾಮರಸ್ಯವನರಿಯದೆ ಖಂಡಿತ ಬುದ್ಧಿಯಿಂದೆ ಲಿಂಗವ ಬೇರಿಟ್ಟುಕೊಂಡು ಸಕಲಭೋಗೋಪಭೋಗವನು ಅರ್ಪಿಸಿದೆವೆಂಬ ಭಂಗಗೇಡಿಗಳ ಮಾತ ಕೇಳಲಾಗದು. ಅದೆಂತೆಂದೊಡೆ: ಆ ಲಿಂಗಕ್ಕೆ ಶರಣನಂಗದ ಮಜ್ಜನಸುಖವಲ್ಲದೆ ಬೇರೆ ಮಜ್ಜನಸುಖವುಂಟೆ? ಆ ಲಿಂಗಕ್ಕೆ ಶರಣನ ಲಲಾಟದ ಶ್ರೀವಿಭೂತಿ ಗಂಧಾಕ್ಷತೆಯ ಶೃಂಗಾರವಲ್ಲದೆ ಬೇರೆ ಶೃಂಗಾರವುಂಟೆ? ಆ ಲಿಂಗಕ್ಕೆ ಶರಣನ ಕರ್ಣದಲ್ಲಿಯ ಪಂಚಮಹಾವಾದ್ಯದ ಕೇಳಿಕೆಯಲ್ಲದೆ ಬೇರೆ ಕೇಳಿಕೆಯುಂಟೆ? ಆ ಲಿಂಗಕ್ಕೆ ಶರಣನ ಜಿಹ್ವೆಯಲ್ಲಿಯ ಷಡುರಸಾನ್ನದ ನೈವೇದ್ಯವಲ್ಲದೆ ಬೇರೆ ನೈವೇದ್ಯವುಂಟೆ? ಆ ಲಿಂಗಕ್ಕೆ ಶರಣನ ಕಂಗಳಲ್ಲಿಯ ನಾನಾ ವಿಚಿತ್ರರೂಪಿನ ವಿನೋದವಲ್ಲದೆ ಬೇರೆ ವಿನೋದವುಂಟೆ? ಆ ಲಿಂಗಕ್ಕೆ ಶರಣನ ತ್ವಕ್ಕಿನಲ್ಲಿಯ ವಸ್ತ್ರಾಭರಣದ ಅಲಂಕಾರವಲ್ಲದೆ ಬೇರೆ ಅಲಂಕಾರವುಂಟೆ? ಆ ಲಿಂಗಕ್ಕೆ ಶರಣನ ಘ್ರಾಣದಲ್ಲಿಯ ಸುಗಂಧ ಪರಿಮಳವರ್ಪಿತವಲ್ಲದೆ ಬೇರೆ ಅರ್ಪಿತವುಂಟೆ? ಆ ಲಿಂಗಕ್ಕೆ ಶರಣನ ಪರಮ ಹೃದಯಕಮಲವೆ ನಿಜವಾಸವಲ್ಲದೆ ಬೇರೆ ನಿಜವಾಸವುಂಟೆ? ಇಂತೀ ಶರಣಸನ್ನಿಹಿತಲಿಂಗ, ಲಿಂಗಸನ್ನಿಹಿತ ಶರಣನೆಂಬುದನರಿಯದೆ ಅನಂತಕಾಲ ಲಿಂಗವ ಧರಿಸಿಕೊಂಡು ಲಿಂಗಾಂಗಿಯೆನಿಸಿಕೊಂಡಡೇನು? ಅದು ಪಶುವಿನ ತೊಡೆಯಲ್ಲಿ ಬರೆದ ಮುದ್ರೆಯಂತೆ ಕಂಡೆಯಾ ಅಖಂಡೇಶ್ವರಾ.