Index   ವಚನ - 77    Search  
 
ಅನ್ಯದೇಹಿಯೆಂದು ಎನ್ನ ಕಳೆಯದಿರು, ಕರ್ಮದೇಹಿಯೆಂದು ಕೈಯ ಬಿಡದಿರು, ಮರ್ತ್ಯನೆಂದು ಮಾಯಕ್ಕೆ ಗುರಿಮಾಡದಿರು, ಮದಡನೆಂದು ಮನವಿಕಾರಕ್ಕೆ ಗುರಿಮಾಡದಿರು, ಅಜ್ಞಾನಿಯೆಂದು ಅಹಂಕಾರಕ್ಕೆ ಗುರಿಮಾಡದಿರು, ಮದದೇಹಿಯೆಂದು ಮಾಯಾತಮಂಧಕ್ಕೆ ಗುರಿಮಾಡದಿರು, ಜಲ ಅಗ್ನಿಯ ಗುಣವಿರಲೊ ಎನ್ನಯ್ಯ. ಅದು ಎಂತೆಂದೊಡೆ: ಜಲ ಹರಿವೆಡೆಯಲ್ಲಿ ಹೊಲಗೇರಿ ಉತ್ತಮಗೇರಿ ಅಮೇಧ್ಯದಗೇರಿಯೆಂದು ನೋಡಿ ಹರಿವುದೆ? ಹರಿಯದು; ಅದಕ್ಕೆಲ್ಲ ಸಮ. ಅಗ್ನಿ ಶ್ವಪಚರ ಮನೆ, ಗೃಹಸ್ಥರ ಮನೆ, ಬೇಡ ಮಾದಿಗ ಹದಿನೆಂಟು ಜಾತಿ ಎಂದು ಅಡಿಯಿಡಲು ಮುನಿವುದೆ? ಮುನಿಯದು. ಎನ್ನ ಅನ್ಯದೇಹಿಯೆಂದು, ಕರ್ಮದೇಹಿಯೆಂದು, ಮರ್ತ್ಯದೇಹಿಯೆಂದು, ಮದಡದೇಹಿಯೆಂದು, ಅಜ್ಞಾನಿಯೆಂದು ಕಳೆದಡೆ ಹುರುಳಿಲ್ಲ. ಅತ್ತಿಯಹಣ್ಣು ಬಿಚ್ಚಿದರೆ ಬಲು ಹುಳು. ಎನ್ನ ಚಿತ್ತದೊಳವಗುಣವ ವಿಸ್ತರಿಸಿದರೇನು? ಫಲವಿಲ್ಲ. ನೋಡದೆ ಕಾಡದೆ ಮಾಯಾತಮವ ಕಳೆದು ಜ್ಞಾನಜ್ಯೋತಿಯ ತೀವು. ಎನ್ನ ನಿಮ್ಮಯ ಶರಣರು ಚೆನ್ನಬಸವಣ್ಣ ಅಕ್ಕನಾಗಮ್ಮ ನೀಲಲೋಚನೆ ನಿಂಬವ್ವೆ ಮಹಾದೇವಿ ಮುಕ್ತಾಯಕ್ಕ ಅಜಗಣ್ಣ ಅಂಬಿಗರ ಚೌಡಯ್ಯ ಕಲಿಕೇತಯ್ಯ ಬ್ರಹ್ಮಯ್ಯ ನಿರ್ಲಜ್ಜಶಾಂತಯ್ಯ ನಿಜಗುಣದೇವರು ಸಿದ್ಧರಾಮಿತಂದೆ ಮರುಳಶಂಕರದೇವರು ಕಿನ್ನರಿಬ್ರಹ್ಮಯ್ಯ ವೀರಗಂಟೆಯ ಮಡಿವಾಳಯ್ಯ ಮೇದರ ಕೇತಯ್ಯಗಳು ಅರವತ್ತುಮೂವರು ಪುರಾತನರು ತೇರಸರು ಷೋಡಶರು ದಶಗಣರು ಮುಖ್ಯವಾದೇಳನೂರಾ ಎಪ್ಪತ್ತು ಅಮರಗಣಂಗಳ ಆಳಿನಾಳಿನಾ ಮನೆಯ ಕೀಳಾಳ ಮಾಡಿ ಅವರ ಲೆಂಕನಾಗಿ, ಅವರುಟ್ಟ ಮೈಲಿಗೆ, ಉಗುಳ್ದ ತಾಂಬೂಲ ಪಾದೋದಕ, ಅವರೊಕ್ಕ ಪ್ರಸಾದಕೆನ್ನ ಯೋಗ್ಯನಮಾಡೆ ಏಳೇಳು ಜನ್ಮದಲ್ಲಿ ಬರುವೆ ಕಂಡಾ, ಭವವಿರಹಿತ ತಂದೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.