Index   ವಚನ - 91    Search  
 
ಅಂಗದೊಳಗಣ ಅಷ್ಟಮೂರ್ತಿ ಮದಂಗಳ ಹಿಂಗಿ ನಿರ್ಮದನಾದಡವಂ ಸತ್ಯ ನಿತ್ಯ. ಪೃಥ್ವಿ ಸಲಿಲಂ ಅಗ್ನಿ ಪವನ ಅಂಬರಮದ ದೊತ್ತಿಲಿ ರವಿ ಶಶಿ ಆತ್ಮಮದವೆಂದೆಂಬ ಕೃತ್ಯದಲ್ಲಿ ನರಳಿ ಹಲವಂ ಬಯಸಿ ಹಂಬಲಿಸಿ ಕತ್ತಲನ್ನೆಲ್ಲವ ಕಳೆದು ನಿರ್ಮದನಾಗಿಯೆ ನಿತ್ಯ ಶ್ರುತ ದೃಷ್ಟ ಅನುಮಾನದಿಂದಲಿ ಶಿವನ ಆತ್ಮದೊಳು ನೆಲೆಗೊಳಿಸಿ ಅಪಮೃತ್ಯು ಮಾರಿಗಳ ಒತ್ತಿರಿಸಿ ಓಂ ನಮಃ ಪ್ರಣಮಪಂಚಾಕ್ಷರಿಯ ಬಿತ್ತರಿಸುತ್ತಿಪ್ಪ ನಿಜ ತಾ ಸತ್ಯ ನಿತ್ಯನು. | 1 | ಅಷ್ಟಾತ್ಮ ಅಷ್ಟತನುವಂತರಂಗದೊಳಿಪ್ಪ ಅಷ್ಟಮೂರ್ತಿಮದಂಗಳಷ್ಟ ಅಂತರ್ ಬಾಹ್ಯ ಅಷ್ಟಮದ ಅಷ್ಟಾಂಗವಾವರಿಪ ಕರ್ಮಗಳನಿಟ್ಟೊರಸಿ ಸುಟ್ಟು ಸೂರೆಮಾಡಬಲ್ಲರೆ ಶರಣ ಇಷ್ಟನೆಲ್ಲವ ಅಂಗದೊಳಹೊರಗೆ ಬಲಿದು ಈ ಕಷ್ಟಕಾಯಕ್ಕೆ ಗುರಿಯಾಗಿ ಕರ್ಮದ ಬೆಳೆಯ ನಷ್ಟಮಾಡಲರಿಯದೆ ವೇದ ಶಾಸ್ತ್ರಾಗಮವ ಎಷ್ಟುದಿನ ಓದಿದರೇನು ವ್ಯರ್ಥ ನಿಜವಿಲ್ಲದಿರಲು. | 2 | ವೇದ ಶಾಸ್ತ್ರಾಗಮ ಪುರಾಣವನೋದಿ ತಾನು ವೇದಿ ಸಂಕಲ್ಪ ಪೂರ್ವದ ಕರ್ಮ ಅನನ್ಯ ಬಾಧೆಗೆ ಕಳೆಯಲರಿಯದೆ ಬರಿಯ ದುರ್ನಡೆಯ ಹಾದಿಗೆಳಸಿಯೆ ನುಡಿದು ನಡೆಯಲರಿಯದೆ ಬಾಧಕತನದೊಡಲ ಹೊರೆವ ಪಿಸುಣನಿಗೆ ಅ- ಸಾಧ್ಯ ಶಿವಮುಕ್ತಿಯೆಂಬುದು ಸ್ವಪನದಲಿಲ್ಲ ಈ ದೇಹವಿಡಿದು ಗುರುಸಿದ್ಧಮಲ್ಲಿನಾಥನ ಪಾದಕ್ರಾಂತದಿ ಶಿವಾನಂದಸುಖಿ ಸತ್ಯ ನಿತ್ಯ.| 3 |