Index   ವಚನ - 117    Search  
 
ಅಹೋ ನಿಲ್ಲಿ ನಿಲ್ಲಿ ವ್ಯಸನಗಳಿರಾ! ಬಲ್ಲೆ ಬಲ್ಲೆ ನಿಮ್ಮ ಗುಣಂಗಳ. ಮಲ್ಲರ ಕಾಳಗದ ನಡುವಿನ ಶಿಶುವಿನಂತೆ, ಎನ್ನ ತುಳಿದೇನೆಂಬಿರಿ. ಬಿಲ್ಲು ಬಾಣದ ನಡುವಿನ ಹುಲಿಯಂತೆ ಎನ್ನ ನಿಲಿಸೇನೆಂಬಿರಿ. ಎಂದರೆ ನಿಮ್ಮ ಹವಣಿಕೆ ಬೇರೆ, ಎನ್ನ ಹವಣಿಕೆ ಬೇರೆ. ಅದು ಹೇಗೆಂದಡೆ: ಎನ್ನ ಹವಣಿಕೆ ಶಿವಜ್ಞಾನಾಗ್ನಿಯಿಂದ ನಿಮ್ಮನುರುವಿ ನಿರ್ವ್ಯಸನಿಯಾದೇನೆಂಬೆ; ನಿಮ್ಮ ಹವಣಿಕೆ ಎನ್ನ ಸುಟ್ಟು ಸೂರೆಮಾಡುವೆನೆಂಬಿರಿಯೆಂದರೆ ನಿಮ್ಮದು ಅನ್ಯದ ಹಾದಿ, ಎನ್ನದು ಪುಣ್ಯದ ಹಾದಿ. ಎನ್ನ ನಿಮ್ಮ ಹಾದಿಯ ನಡುಮಧ್ಯದಲ್ಲಿಪ್ಪ ಮನೋಮೂರ್ತಿಮಹಾಲಿಂಗ ಮಾಡಿದಂತೆ ಆಗುವೆ, ಆಡಿಸಿದಂತೆ ಆಡುವೆ, ನಡೆಸಿದಂತೆ ನಡೆವೆ, ನುಡಿಸಿದಂತೆ ನುಡಿವೆ, ಕೆಡಸಿದಂತೆ ಕೆಡವೆನೈ; ಇನ್ನಂಜೆ. ವೈದ್ಯನ ನಂಬಿ ಸೇವಿಸಿದರೆ ವ್ಯಾಧಿ ಪರಿಹಾರವಾಗುವುದು; ಮಂತ್ರವ ನಂಬಿ ಜಪಿಸಿದರೆ ಭೂತ ಪ್ರೇತಗಳ ಭಯ ಪರಿಹಾರ. ಹಡಗವ ನಂಬಿದವರು ಕಡಲವ ದಾಟುವರು. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವಿನ ನಂಬಿದವರು ಭವಸಾಗರವ ದಾಟುವರು.