Index   ವಚನ - 147    Search  
 
ಆಶೆಯಾಮಿಷವೆಂಬ ಮಾಯಾಪಾಶಕೆನ್ನ ಗುರಿಮಾಡಿ ನೀ ಸಿಕ್ಕದೆ ನಿರ್ಮಾಯನಾಗಿ ಮಾಯಕದ ಬಲೆಯೊಳಿಟ್ಟೆನ್ನ. ಅದು ಎಂತೆಂದರೆ: ನೆನೆವ ಮನಕಾಸೆಯನೆ ತೋರಿದೆ, ನೋಡುವ ಕಂಗಳಿಗಾಸೆಯನೆ ನೋಡಿಸಿದೆ, ನುಡಿವ ಜಿಹ್ವೆಗೆ ಆಸೆಯನೆ ನುಡಿಸಿದೆ, ಕೇಳುವ ಕರ್ಣಕೆ ಆಸೆಯನೆ ಕೇಳಿಸಿದೆ, ವಾಸಿಸುವ ನಾಸಿಕಕೆ ಆಸೆಯನೆ ವಾಸಿಸಿದೆ, ಮುಟ್ಟುವ ಹಸ್ತಕ್ಕೆ ಆಸೆಯನೆ ಮುಟ್ಟಿಸಿದೆ. ಆಸೆಯನೆ ಕಳೆದು, ನಿರಾಸೆಯಾಗಿಪ್ಪ ಶರಣರ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.