Index   ವಚನ - 167    Search  
 
ಅಕಟಾ, ರಾಟಾಳದ ಘಟದಂತೆ ಭವಾರಣ್ಯದೊಳು ತಿರುಗಿತಿರುಗಿ ಸತ್ತು ಸತ್ತು ಹುಟ್ಟುವಂತಿದ್ದೆನಯ್ಯಾ. ಅದು ಎಂತೆಂದರೆ: ಸ್ವೇದಜ ಉದ್ಬಿಜ ಜರಾಯುಜ ಅಂಡಜವೆಂಬ ನಾಲ್ಕು ತೆರದ ಮುಖ್ಯ ಆನೆ ಕಡೆ ಇರುವೆ ಮೊದಲು ಎಂಬತ್ತುನಾಲ್ಕು ಲಕ್ಷ ಜೀವರಾಶಿಯಲ್ಲಿ ಒಂದೊಂದು ಯೋನಿಯಲ್ಲಿ ಸಾವಿರಬಾರಿ ತಿರುಗಿ, ಆವಾವ ಜನ್ಮದಲ್ಲಿ ಆವಾವ ಆಹಾರವನುಂಡು, ಆವಾವ ಭೂಮಿಯಲ್ಲಿ ಪುಟ್ಟಿ, ಆವಾವ ಕರ್ಮವ ಕಂಡು, ಭಂಗ ಬಡುತ್ತಿದ್ದುದಯ್ಯಾ ಶರೀರ. ಸಾಕ್ಷಿ: ``ನಾನಾಯೋನಿಸಹಸ್ರಾಣಿ ಕೃತಂ ಚೈವ ತು ಮಾಯಯಾ | ಅನೇಕಂ ವಿವಿಧಾಹಾರಂ ಪೀತಾಶ್ಚ ವಿವಿಧಾಃ ಸ್ತನಾಃ ||'' ಎಂದುದಾಗಿ, ಇಂತಪ್ಪ ಸಂಸಾರಭ್ರಾಂತಿನ ಬಲೆಯ ತೊಲಗಿಸಿ ನಿಃಸಂಸಾರಿಯಾಗಿಪ್ಪ ಶರಣರ ಪಾದಕ್ಕೆ ನಮೋ ನಮೋಯೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.