Index   ವಚನ - 166    Search  
 
ನೆಲೆಯನರಿಯದ ಮನುಜರು ಜಲವ ಹೊಕ್ಕರೆ ಮುಳುಗುವರಲ್ಲದೆ ನೆಲೆಯಬಲ್ಲವರು ಮುಳುಗುವರೇನಯ್ಯಾ? ಆ ತೆರದಿ, ನಾ ನೆಲೆಯನರಿಯದೆ ಸಂಸಾರವೆಂಬ ಸಾಗರ ಹೊಕ್ಕರೆ ಪ್ರಥಮದಲ್ಲಿ ಜಂಘೆಗೆ ಬಂತು, ದ್ವಿತೀಯೆಯಲ್ಲಿ ಮಣಿಪಾದಕ್ಕೆ ಬಂತು, ತೃತೀಯೆಯಲ್ಲಿ ಕಟಿಸ್ಥಾನಕ್ಕೆ ಬಂತು, ಚತುರ್ಥದಲ್ಲಿ ನಾಭಿತನಕ್ಕೆ ಬಂತು, ಪಂಚಮದಲ್ಲಿ ಉರಸ್ಥಾನಕ್ಕೆ ಬಂತು, ಆರನೆಯಲ್ಲಿ ಕಂಠಸ್ಥಾನಕ್ಕೆ ಬಂತು, ಏಳನೆಯಲ್ಲಿ ಸರ್ವಾಂಗವನೆಲ್ಲ ಮುಳುಗಿ ಸಲೆ ಸಾಯಲಾರದೆ ಒದ್ದಾಡುತ್ತಿರುವನ ಕಂಡು ಸುಮ್ಮನಿರದಿರೋ ಭೈತ್ರಾಧಿಪತಿಯೆ, ನಿನ್ನ ಕರುಣಕೃಪೆಯೆಂಬ ಭೈತ್ರವ ಎನ್ನ ಕಡೆಗೆ ತಂದು `ಸಂಸಾರಸಾಗರಜಲಂ' ಎಂದುದಾಗಿ, ಸಂಸಾರಸಾಗರದ ನಟ್ಟನಡುವೆ ಮುಳುಗಿಪ್ಪವನನೆಳೆದು ತೆಗೆಯೊ ಅಘಹರನೆ ಅಮೃತಕರನೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.