ಬಂಧನ ಸಂಸಾರದಂದುಗದ ದಾಳಿಯಲ್ಲಿ
ನೊಂದು ಬೆಂದೆನೊ ಎನ್ನ ಹುಯ್ಲು
ತಂಬಿಸು ಗುರುವೆ ಭವಹರ ನಿತ್ಯನಿರ್ಮಳಾತ್ಮಕ ಶಂಭುವೆ.
ಹಲವು ಜನ್ಮದಿ ಹುಟ್ಟಿ ಹಲವಾಹಾರವನುಂಡು
ಹಲವು ಭೂಮಿಯ ಮೆಟ್ಟಿ ಹಲವು ಕರ್ಮವ ಕಂಡು
ಹಲವು ಭವಕೀಡಾಗಿ ಹಲವು ಹಂಬಲಿಸುತಿರುವ
ಹೊಲೆಜನ್ಮ ಸಂಸಾರ ಮಾಯಾರಕ್ಕಸಿ ತುಡುರೆ
ನಿಲ್ಲಲಾರದಲಿ ನಿಮ್ಮ ಮರೆಹೊಕ್ಕೆ ಎನ್ನ ಕೊಡದೆ
ಗೆಲಿದುಕೊ ದುರಿತಹರ ಕರುಣಾಳು ಪರಮಗುರುವೆ. | 1 |
ಸಟೆ ಠಕ್ಕು ಠೌಳಿ ಅಟಮಟದ ಬಂಧನದ
ಕುಟಿಲಸಂಸಾರಸಾಗರದ ತೊರೆನೆರೆಗಳೊಳು
ಪುಟನೆಗೆದು ತಲೆ ಮುಣುಗುತಲಿರುವನ ಕಂಡು
ನಿಟಿಲಾಕ್ಷ ಕೃಪೆಯೆಂಬ ಹಡಗವನು ತಂದೊಲಿ
ತಟಕೆನ್ನನೆಳೆದು ತಗೆದೀಗ ಇನಿತಾತ್ಮ
ಘಟದೊಳಗೆ ಜ್ಞಾನಜ್ಯೋತಿಯ ತೀವು ಪರಮಗುರುವೆ. | 2 |
ರಸವಿಷಯ ಮೋಹನದ ಕೂಪಜಲದೊಳು ಮುಳುಗಿ
ದೆಸೆದೆಸೆಗೆ ಚಾಲಿವರಿವನ ಕಂಡು ಬೇಗದಲಿ
ವಿಷಕಂಠ ದುರಿತಸಂಹರ ಕರುಣಾಕರ ತೊಟ್ಟಿಲಿಗೆ
ಎಸೆವ ಹಗ್ಗವ ಕಟ್ಟಿ ಎಳೆದು ತಗೆಯೆನ್ನ ರಂ-
ಬಿಸುತ ಸಂತೈಸಿ ದುಃಖದಲ್ಲಿ ಭೋರ್ಗರೆದಳುವ
ಶಿಶುವ ಬೋಳೈಸುವಂದದಲೆನ್ನ ಬೋಳೈಸು
ಅಸಮಾಕ್ಷ ಪರಮಗುರುವೆ.| 3 |
ತೆರಣಿಯ ಹುಳು ನೂಲು ಸುತ್ತಿಕೊಂಡು ಎಸೆವ
ತೆರದಿ ಈ ಸಂಸಾರ ಸುಖದುಃಖ ಎನ್ನನು ಸುತ್ತಿ
ಪರಿಭವಕ್ಕೆ ಗುರಿಯಾಗಿ ಯೋನಿಯಂತ್ರದೆ
ತಿರುಗಿಯೆ ಬರುತಲಿರ್ದೆನು ಘೋರ ಅರಣ್ಯದೊಳು ಸುತ್ತಿ
ಹರಹರ ನಿಮ್ಮ ಸ್ಮರಣೆಯ ಮರೆದ ಕಾರಣದಿ
ದುರಿತನ್ಯಾಯದ ಬಂಧನಕೆ ಗುರಿಯಾಗಿದ್ದೆನಯ್ಯಾ ಶಿವನೆ. | 4 |
ಮಾಯಾಸಂಸಾರಸರ್ಪನ ವಿಷವು ತಲೆಗೇರಿ
ನೋಯುತಿದ್ದೆನು ಹಲವುವಿಧದಾಸೆಪಾಶದಲಿ
ಬೇಯುವವನ ಕಂಡು ನೀ ಬೇಗಲೊಯಿದ್ಯವ ಮಾಡಿಯೆ
ಶವವನುಳುವಿಕೋ ಭವರೋಗವೈದ್ಯ
ನಿತ್ಯ ಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭು
ನೀವಲ್ಲದೆನಗನ್ಯವಿಲ್ಲ ಕಾಯೋ ಕಾಯೋ ದೇವಾ. | 5 |
Art
Manuscript
Music
Courtesy:
Transliteration
Bandhana sansāradandugada dāḷiyalli
nondu bendeno enna huylu
tambisu guruve bhavahara nityanirmaḷātmaka śambhuve.
Halavu janmadi huṭṭi halavāhāravanuṇḍu
halavu bhūmiya meṭṭi halavu karmava kaṇḍu
halavu bhavakīḍāgi halavu hambalisutiruva
holejanma sansāra māyārakkasi tuḍure
nillalāradali nim'ma marehokke enna koḍade
geliduko duritahara karuṇāḷu paramaguruve. | 1 |
Saṭe ṭhakku ṭhauḷi aṭamaṭada bandhanada
kuṭilasansārasāgarada toreneregaḷoḷu
puṭanegedu tale muṇugutaliruvana kaṇḍu
Niṭilākṣa kr̥peyemba haḍagavanu tandoli
taṭakennaneḷedu tagedīga initātma
ghaṭadoḷage jñānajyōtiya tīvu paramaguruve. | 2 |
Rasaviṣaya mōhanada kūpajaladoḷu muḷugi
desedesege cālivarivana kaṇḍu bēgadali
viṣakaṇṭha duritasanhara karuṇākara toṭṭilige
eseva haggava kaṭṭi eḷedu tageyenna raṁ-
bisuta santaisi duḥkhadalli bhōrgaredaḷuva
śiśuva bōḷaisuvandadalenna bōḷaisu
asamākṣa paramaguruve.| 3 |
Teraṇiya huḷu nūlu suttikoṇḍu eseva
teradi ī sansāra sukhaduḥkha ennanu sutti
paribhavakke guriyāgi yōniyantrade
tirugiye barutalirdenu ghōra araṇyadoḷu sutti
harahara nim'ma smaraṇeya mareda kāraṇadi
duritan'yāyada bandhanake guriyāgiddenayyā śivane. | 4 |
Māyāsansārasarpana viṣavu talegēri
nōyutiddenu halavuvidhadāsepāśadali
bēyuvavana kaṇḍu nī bēgaloyidyava māḍiye
śavavanuḷuvikō bhavarōgavaidya
nitya guru paḍuviḍi sid'dhamallināthaprabhu
nīvalladenagan'yavilla kāyō kāyō dēvā. | 5 |