Index   ವಚನ - 195    Search  
 
ಗಗನದ ತಮವ ಕಳೆವರೆ ರವಿ ಅಧಿಕ ನೋಡಾ. ವಿಪಿನದ ತರುಗಿರಿಕಾಷ್ಠವೆಲ್ಲಕೆಯು ಸುರತರು ಅಧಿಕ ನೋಡಾ. ನವರತ್ನ ಮಾಣಿಕ್ಯ ಮೌಕ್ತಿಕ ವಜ್ರ ಪುಷ್ಯರಾಗ ಅರ್ಥಭಾಗ್ಯವೆಲ್ಲಕ್ಕೆಯಾ ಪರುಷವಧಿಕ ನೋಡಾ. ಧರೆಮೂರುಲೋಕದ ಗೋವುಗಳಿಗೆಲ್ಲ ಸುರಭಿಯಧಿಕ ನೋಡಾ. ಈರೇಳು ಭುವನ ಹದಿನಾಲ್ಕು ಲೋಕವೆಲ್ಲಕ್ಕೆಯಾ ಗುರುವಿಂದಧಿಕವಿಲ್ಲ ನೋಡಾ. ಸಾಕ್ಷಿ: ನ ಗುರೋರಧಿಕಂ ನ ಗುರೋರಧಿಕಂ ನ ಗುರೋರಧಿಕಂ | ವಿದಿತಂ ವಿದಿತಂ ವಿದಿತಂ ವಿದಿತಂ ಶಿವಶಾಸನಂ ||'' ಎಂದುದಾಗಿ, ಗುರುವಿಂದಧಿಕವಿಲ್ಲ, ಗುರುವಿಂದಧಿಕವಿಲ್ಲ, ಗುರುವೆ ಪರಮಾತ್ಮ. ಎನ್ನ ಮಾನವಜನ್ಮದ ಹೊಲೆಯ ಕಳೆದು ಶಿವದೇಹಿಯ ಮಾಡಿದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗೆ ಇದೇ ನರಕ.