Index   ವಚನ - 200    Search  
 
ಅಂದು ಸಹಸ್ರಜನ್ಮಾಂತರ ದಲ್ಲಿ ತಪೋಧ್ಯಾನವ ಮಾಡಿ ಪಡೆದಕಾರಣ ಮುಂದೆನಗೆ ಗುರುಪಾದ ದೊರೆಯಿತ್ತು. ಆ ಗುರುಪಾದದರುಶನದಿಂದ ಹಿಂದೇಳು ಜನ್ಮಾಂತರದಲ್ಲಿ ಭವಾಂತರ ಹಿಂಗಿ, ಇಂದೆನಗೆ ಶಿವಲಿಂಗವ[ನಿರಿಸೆ], ಶಿವದೇಹಿ ಶಿವಭಕ್ತ ಶಿವಮಾಹೇಶ್ವರನೆಂಬ ನಾಮ ನನಗಾಯಿತ್ತು ನೋಡಾ. ಸಾಕ್ಷಿ: ಜನ್ಮಾಂತರಸಹಸ್ರೇಷು ತಪೋ ಧ್ಯಾನಂ ಸಮಾಚರೇತ್ | ನರಾಣಾಂ ಕ್ಷೀಣಪಾಪಾನಾಂ ಶಿವೇ ಭಕ್ತಿಃ ಪ್ರಜಾಯತೇ ||'' ಎಂದುದಾಗಿ, ಹೀಗೆಂಬ ಸುಕೃತಫಲದಿಂದ ಭವಸಾಗರವ ದಾಂಟಿ ಭಕ್ತ ಬಸವಣ್ಣ ಮಾಹೇಶ್ವರ ಪ್ರಭುರಾಯರು ಮುಖ್ಯವಾದ ಪ್ರಮಥಗಣಂಗಳ ಲೆಂಕರ ಲೆಂಕನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.