Index   ವಚನ - 203    Search  
 
ಗುರುವ ನರನೆಂದು ನುಡಿವ ಕುರಿಮಾನವರ ನೆರೆಹೊರೆಯಲ್ಲಿರಲಾಗದು. ದೊರೆಸಂಗವಾದರೂ ನುಡಿಸಲಾಗದು. ನುಡಿಸಿದರೆ ಮಹಾನರಕವಯ್ಯಾ! ಗುರುವೆ ಪರಶಿವನು, ಗುರುವೆ ಪರಬ್ರಹ್ಮ, ಗುರುವು ಹರನಿಂದಲಧಿಕ. ಗುರುವಿನಿಂದ ಹರನ ಕಾಣ್ಬರಲ್ಲದೆ, ಹರನಿಂದ ಗುರುವ ಕಾಣಬಾರದು. ಅದು ಎಂತೆಂದರೆ: ಮರ್ತ್ಯಲೋಕಕ್ಕೆನ್ನ ಮಾನವಶರೀರಿಯ ಮಾಡಿ ಕಳುಹಿ, ಎನ್ನ ಮಾನವಜನ್ಮದ ಬಂಧನ ಕಳೆದು, ಗುರುವಾಗಿ ಬಂದು ಮುಕ್ತಿಯ ತೋರಿಸಿ ಕೈಲಾಸಕೆನ್ನ ಯೋಗ್ಯನ ಮಾಡಿದ. ಇಹದಲ್ಲಿ ಪುಣ್ಯ, ಪರದಲ್ಲಿ ಮುಕ್ತಿಯೆಂಬ ಇವನೆರಡು ಗುರುಪಾದದಲ್ಲಿಯೆ ಕಂಡೆನಯ್ಯಾ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.