Index   ವಚನ - 215    Search  
 
ಗುರುಲಿಂಗವಿದ್ದ ಊರು ಸೀಮೆಯ ಕಂಡಾಕ್ಷಣವೆ ತುರಗ ಅಂದಣಾದಿಗಳನಿಳಿದು, ಭಯಭಕ್ತಿಕಿಂಕುರ್ವಾಣದಿಂದ ಹೋಗಿ, ಗುರುವಿನ ಪಾದೋದಕವ ಕೊಂಬುದು ಶಿಷ್ಯಗೆ ನೀತಿ. ಸಾಕ್ಷಿ: ಶಿಷ್ಯೋ ಗುರುಸ್ಥಿತಂ ಗ್ರಾಮಂ ಪ್ರವೇಶಿತಂ ವಾಹನಾದಿಕಂ | ವರ್ಜಯೇತ್ ಗೃಹಸಾಮೀಪ್ಯಂ ಛಂದಯೋಶ್ಚ ವಿಪಾದುಕಃ || '' ಎಂದುದಾಗಿ, ಹೀಗೆಂಬುದನರಿಯದೆ ಅಹಂಕಾರದಲ್ಲಿ ಬೆಬ್ಬನೆ ಬೆರತು, ಗುರುವಿದ್ದ ಊರು ಸೀಮೆಯೊಳು ಅಂದಣ ಕುದುರೆಯನೇರಿ ನಡೆದರೆ ರೌರವ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.