Index   ವಚನ - 229    Search  
 
ಹೆಳವನಿದ್ದೆಡೆಗೆ ಜಲನಿಧಿ ನಡೆತಂದಂತೆ, ಕರುಣಜಲಮೂರ್ತಿಲಿಂಗ ಎನ್ನ ಕರಸ್ಥಲಕೆ ನಡೆತಂದನಲ್ಲ! ರೋಗಿಯಲ್ಲಿಗೆ ಅಮೃತವೆ ಮೈಯಾಗಿ ನಡೆತಂದಂತೆ, ಭವರೋಗದ ಪಾಪಿ ಪಿಸುಣಮಾನವನಿದ್ದೆಡೆಗೆ ಅಮೃತಕರಮೂರ್ತಿ ನಡೆತಂದನಲ್ಲ ಎನ್ನ ಕರದೊಳು! ಘೋರಾಂಧಕಾರದ ಕತ್ತಲೆಯೊಳು ತೊಳಲಿ ಬಳಲುವ ಕಮಲದೆಡೆಗೆ ಸೂರ್ಯನುದಯವಾದಂತೆ, ಮಾಯಾತಮಂಧವೆಂಬ ಕತ್ತಲೆಯೊಳು ತೊಳಲಿಬಳಲುವ [ವೇಳೆಯೊಳು] ದ್ಯುಮಣಿಕೋಟಿ ಪ್ರಕಾಶಲಿಂಗವ ಕಂಡೆನಲ್ಲಾ ಎನ್ನ ಕರದೊಳು! ಹಗಲೆ ಬಳಲುವ ಕುಸುಮದೆಡೆಗೆ, ಇರುಳುಗವಿದು, ಶಶಿ ಉದಯವಾದಂತೆ, ಹಗಲು ಇರುಳೆಂಬ ಬಂಧನದ ಬಯಕೆಗೆ ಸಿಕ್ಕಿದ ಮಾನವನೆಡೆಗೆ ಶಶಿಕಾಂತಲಿಂಗ ಉದಯವಾದನಲ್ಲ ಎನ್ನ ಕರದೊಳು! ಸುದತಿ ಬಯಸಲು ಪುರುಷಾತ್ಮ ಕೈಸಾರಿದಂತೆ ಹಲವು ಜನನದಿ ಬಯಸಿ ಬಳಸಿದರೂ ಸಿಲ್ಕದ ಲಿಂಗವೆನ್ನ ಕೈಸಾರಿತಲ್ಲ! ಪರವೆ ಗೂಡಾಗಿಪ್ಪ ಲಿಂಗವ ಕಂಡೆನಲ್ಲ ಎನ್ನ ಕರದೊಳು! ಶರೀರದೊಳು ಪರಿಪೂರ್ಣವಾಗಿಹ ಲಿಂಗವ ಕಂಡೆನಲ್ಲ ಎನ್ನ ಕರದೊಳು! ಸಾಕ್ಷಿ: “ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾಮಯಮ್ |'' ಯಥ್ಶೆಶ್ವರಂ ಹ್ಯಾದಿ ತೇಜಃ ತಲ್ಲಿಗಂ ಪಂಚಸಂಜ್ಞಕಂ ||'' ಎಂಬ ಪಂಚಸಂಜ್ಞೆಯನೊಳಕೊಂಡ ಲಿಂಗವು ಎನ್ನ ಕರಸ್ಥಲ ಉರಸ್ಥಲ ಶಿರಸ್ಥಲ ಮನಸ್ಥಲ ಜ್ಞಾನಸ್ಥಲ ಭಾವಸ್ಥಲ ಪರಿಪೂರ್ಣವಾಗಿ `ಲಿಂಗದಷ್ಟಸ್ಯ ದೇಹನಂ', ಸರ್ವಾಂಗದೊಳಗೆಲ್ಲ ಲಿಂಗಮಯವಾಗಿ ಲಿಂಗಲಿಂಗ ಸಂಗಸಂಗಯೆಂಬಾ ಪರಮಹರುಷದೊಳೋಲಾಡುತಿದ್ದೆನಲ್ಲಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.